ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮೇ ವೇಳೆಗೆ ದೇಶದ ಆರ್ಥಿಕ ಹಣದುಬ್ಬರ ಶೇ.37.97ರ ಏರಿಕೆಯೊಂದಿಗೆ ವಿಕೋಪಕ್ಕೆ ಹೋಗಿದ್ದು, ದಕ್ಷಿಣ ಏಷ್ಯಾದಲ್ಲೇ ಇದು ಅತಿ ಹೆಚ್ಚು ಹಣದುಬ್ಬರ ದಾಖಲಿಸಿರುವ ದೇಶವೆಂದು ವರದಿಯಲ್ಲಿ ಹೇಳಲಾಗಿದೆ.
ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದ ನೆರೆ ರಾಷ್ಟ್ರ ಲಂಕಾದ ವಾರ್ಷಿಕ ಹಣದುಬ್ಬರ ಪ್ರಮಾಣ ಶೇ.25.2ರಷ್ಟಿತ್ತು. ಆದರೀಗ ಪಾಕಿಸ್ತಾನದ ಪರಿಸ್ಥಿತಿ ಲಂಕಾವನ್ನೂ ಮೀರಿಸಿದೆ. ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ರೂಪಾಯಿ ಮೌಲ್ಯ ಕುಸಿತ, ಬಾಹ್ಯ ಸಾಲ, ವಿದೇಶಿ ವಿನಿಮಯ ಬಾಕಿ ಪಾವತಿಯಂಥ ಸಮಸ್ಯೆ ಹಾಗೂ ಜಾಗತಿಕ ಇಂಧನ ಬಿಕ್ಕಟ್ಟು, 2020ರಲ್ಲಿ ಪಾಕ್ನಲ್ಲಿ ಸಂಭವಿಸಿದ ಪ್ರವಾಹಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕ್ನಲ್ಲಿ ಹಣದುಬ್ಬರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಇದಿಷ್ಟೇ ಅಲ್ಲದೇ, ವರ್ಷದಿಂದ ವರ್ಷಕ್ಕೆ ಹಣದುಬ್ಬರದ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದ್ದು, ಆಹಾರ ಪದಾರ್ಥಗಳಾದ ಆಲೂಗಡ್ಡೆ, ಗೋಧಿ ಹಿಟ್ಟು, ಚಹಾ, ಮೊಟ್ಟೆ, ಅಕ್ಕಿಯ ಬೆಲೆ ತೀವ್ರ ಏರಿಕೆಯಾಗಿದೆ. ಆಹಾರ ಪದಾರ್ಥಗಳನ್ನು ಹೊರತುಪಡಿಸಿದರೆ ಟೆಕ್ಸ್ಟ್ ಬುಕ್ಸ್ಗಳು, ಸ್ಟೇಷನರಿ ವಸ್ತುಗಳು, ಇಂಧನ, ಸಾಬೂನು, ಬೆಂಕಿ ಪಟ್ಟಣದ ಬೆಲೆಯೂ ತೀವ್ರ ಹೆಚ್ಚಳವಾಗಿದ್ದು ಇದರಿಂದ ಜನತೆ ಕಂಗಾಲಾಗಿದ್ದಾರೆ.