ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದಗಳ ಮೂಲಕ ತೆರೆಕಂಡು ಸಾಕಷ್ಟು ಕಲೆಕ್ಷನ್ ಮಾಡಿದೆ. ಈಗಾಗ್ಲೆ ಸಾಕಷ್ಟು ಮಂದಿ ಚಿತ್ರದ ಕುರಿತು ಪ್ರತಿಕ್ರಿಯಿಸಿದ್ದು ಇದೀಗ ನಟ ಕಮಲ್ ಹಾಸನ್ ಇಂಥಹ ಚಿತ್ರಗಳನ್ನು ಜನ ನೋಡಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಟ ಕಮಲ್ ಹಾಸನ್ ಚಿತ್ರರಂಗದಲ್ಲಿ ನಡೆಯುವ ಅನೇಕ ಆಗುಹೋಗುಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಕಮಲ್ ಹಾಸನ್ ‘ದಿ ಕೇರಳ ಸ್ಟೋರಿ’ ಸಿನಿಮಾದ ಕುರಿತು ಅಪಸ್ವರ ತೆಗೆದಿದ್ದರು. ಈ ಬಾರಿ ಅವರು ಮತ್ತೆ ಅದೇ ವಿಚಾರದ ಕುರಿತು ಮಾತನಾಡಿದ್ದಾರೆ.
‘ಇಂಡಿಯಾ ಟುಡೇ ಕಾನ್ಕ್ಲೇವ್ ಸೌತ್ 2023’ನಲ್ಲಿ ಭಾಗಿ ಆಗಿ ಕಮಲ್ ಹಾಸನ್, ‘ನಾನು ಯಾವುದೇ ಸಿನಿಮಾ ಬ್ಯಾನ್ ಮಾಡಲು ಬಯಸಲ್ಲ. ಚಿತ್ರವನ್ನು ಮತ್ತು ಚಿತ್ರದ ಉದ್ದೇಶ ಏನು ಎಂಬುದನ್ನು ಜನರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.
‘ವಿಶ್ವರೂಪಂ ಸಿನಿಮಾ ತಮಿಳುನಾಡಿನಲ್ಲಿ ಬ್ಯಾನ್ ಆಯಿತು. ಇದನ್ನು ಏಕೆ ನಿಷೇಧಿಸಲಾಯಿತು ಎಂಬ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ. ಆ ಬಳಿಕ ರಾಜ್ ಕಮಲ್ ಫಿಲ್ಮ್ಸ್ ಮತ್ತು ತಮಿಳುನಾಡು ಸರ್ಕಾರದ ನಡುವೆ ಕಾನೂನಾತ್ಮಕ ಹೋರಾಟ ಆಯಿತು. ನಾವು ಪ್ರಕರಣವನ್ನು ಗೆದ್ದು ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಮಾಡಿದೆವು. ನಾನು ಯಾವುದೇ ಸಿನಿಮಾನ ನಿಷೇಧಿಸಬೇಕು ಎಂದು ಪ್ರತಿಪಾದಿಸುವುದಿಲ್ಲ’ ಎಂದು ಹೇಳಿದ್ದಾರೆ.
‘ದಿ ಕೇರಳ ಸ್ಟೋರಿ’ ಚಿತ್ರವನ್ನು ನೋಡುವಂತೆ ಹೇಳಿದ್ದು, ‘ನಮ್ಮ ದೇಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ಮಾತನಾಡಬಹುದು. ದಿ ಕೇರಳ ಸ್ಟೋರಿ ಅಂಥ ಚಿತ್ರಗಳನ್ನು ಜನರು ಸತ್ಯ ಎಂದು ಭಾವಿಸಿ ಹೋಗಿ ವೀಕ್ಷಿಸಬಾರದು. ಈ ರೀತಿಯ ಚಿತ್ರಗಳನ್ನು ಜನರು ನೋಡಬೇಕು ಮತ್ತು ಆ ಬಳಿಕ ಆಲೋಚಿಸಬೇಕು’ ಎಂದಿದ್ದಾರೆ.