ದೆಹಲಿ: ಎರಡು ತಿಂಗಳು ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮನರಂಜನೆಯಲ್ಲಿ ಮುಳುಗೆದ್ದ ಕ್ರಿಕೆಟ್ ಪ್ರಿಯರು ಇದೀಗ ಟೆಸ್ಟ್ ಕ್ರಿಕೆಟ್ನ ವಿಶ್ವಕಪ್ ಫೈನಲ್ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಎರಡನೇ ಆವೃತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪೈಪೋಟಿ ನಡೆಸಲಿದ್ದು, ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಜೂನ್ 7ರಿಂದ 11ರವರೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಅಂದಹಾಗೆ ಭಾರತ ತಂಡ ಕೆಲ ಪ್ರಮುಖ ಆಟಗಾರರ ಸೇವೆ ಕಳೆದುಕೊಂಡಿದೆ. ಗಾಯದ ಸಮಸ್ಯೆ ಎದುರಿಸಿರುವ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಪ್ರಮುಖವಾಗಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅಲಭ್ಯತೆ ಭಾರತ ತಂಡಕ್ಕೆ ಭಾರಿ ನಷ್ಟ ತಂದೊಡ್ಡಿದೆ. ಪಂತ್ ಅಲಭ್ಯತೆ ಕಾರಣ ಭಾರತ ತಂಡ ಯಾವ ವಿಕೆಟ್ಕೀಪರ್ ಬ್ಯಾಟ್ಸ್ಮನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲಕ್ಕೆ ಸಿಲುಕಿದೆ.
ಸದ್ಯ ಭಾರತ ತಂಡದಲ್ಲಿ ಅನನುಭವಿಗಳಾದ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಇದ್ದಾರೆ. ಭರತ್ ಕೇವಲ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇಶಾನ್ ಕಿಶನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಬೇಕಿದೆ. ಈ ಬಗ್ಗೆ ಮಾತನಾಡಿದ ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಕಿಶನ್ ಮತ್ತು ಭರತ್ ಬದಲು ಭಾರತ ತಂಡ 38 ವರ್ಷದೆ ಅನುಭವಿ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಭರತ್ ಬದಲು ಕಿಶನ್ನ ಆಡಿಸುವುದೇ ಉತ್ತಮ ಎಂದಿದ್ದಾರೆ.
“ಕೆಎಸ್ ಭರತ್ ಈಗ ಭಾರತ ತಂಡದ ಪರ ಆಡುತ್ತಿದ್ದಾರೆ. ಹೀಗಾಗಿ ಅವರನ್ನೇ ಆಡುವ 11ರ ಬಳಗದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅವರ ಜಾಗದಲ್ಲಿ ವೃದ್ಧಿಮಾನ್ ಸಹಾ ಇದ್ದರೆ ಖಂಡಿತಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅವರನೇ ಆಡಿಸಿ ಎಂದು ಸಲಹೆ ನೀಡುತ್ತಿದ್ದೆ. ಅವರಲ್ಲಿ ಹೆಚ್ಚು ಅನುಭವವಿದೆ. ಉತ್ತಮ ವಿಕೆಟ್ಕೀಪರ್ ಕೂಡ. ಇನ್ನು ಕೆಎಲ್ ರಾಹುಲ್ ಫಿಟ್ನೆಸ್ ಉತ್ತಮವಾಗಿದ್ದರೆ ಭರತ್ ಬದಲು ಖಂಡಿತಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ,” ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಜ್ಜಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.