ಲಂಡನ್: ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಸಜ್ಜಾಗುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್, ಶುಕ್ರವಾರ (ಜೂನ್ 2) ತಮ್ಮ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ತಮ್ಮ ನೆಚ್ಚಿನ ಆಟಗಾರನ ಜನಮ ದಿನಕ್ಕೆ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಶುಭ ಕೋರಿದ್ದಾರೆ. ಇದರ ನಡುವೆ ಇಂಗ್ಲೆಂಡ್ ತಂಡದ ಅಧಿಕೃತ ಅಭಿಮಾನಿ ಬಳಗ ‘ಬಾರ್ಮಿ ಆರ್ಮಿ’ ಸೋಶಿಯಲ್ ಮೀಡಿಯಾದಲ್ಲಿ ಆಸೀಸ್ ಮಾಜಿ ನಾಯಕನಿಗೆ ವಿಭಿನ್ನ ಶೈಲಿಯಲ್ಲಿ ಶುಭ ಕೋರಿ ಟ್ರೋಲ್ ಮಾಡಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಟೀವನ್ ಸ್ಮಿತ್ ಅಳುತ್ತಿರುವ ಹಳೆಯ ಪೋಟೋವನ್ನು ಹಂಚಿಕೊಂಡ ಬಾರ್ಮಿ ಆರ್ಮಿ, “ಜನುಮ ದಿನದ ಶುಭಾಶಯ ಸ್ಟೀವನ್ ಸ್ಮಿತ್, ಆದಷ್ಟು ಬೇಗ ನಿಮ್ಮನ್ನು ನೋಡುತ್ತೇವೆ,” ಎಂಬ ಶೀರ್ಷಿಕೆಯನ್ನು ನೀಡಿದೆ. ಇದಕ್ಕೆ ಕೆಲ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ಬಾರ್ಮಿ ಆರ್ಮಿ ಪೋಸ್ಟ್ ಮಾಡಿರುವ ಫೋಟೋ 2018ರದು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಸ್ಟೀವನ್ ಸ್ಮಿತ್ ಅವರು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಣ್ಣೀರಿಟ್ಟಿದ್ದರು. ಇದೇ ಫೋಟೋವನ್ನು ಇದೀಗ ಬಾರ್ಮಿ ಆರ್ಮಿ ಹಂಚಿಕೊಂಡು ಟ್ರೋಲ್ ಮಾಡಿದೆ.