ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ.
ಇದು ಕಾಂಗ್ರೆಸ್ ಪಕ್ಷದ ಜನಪರ ಬದ್ಧತೆಗೆ ದೊಡ್ಡ ನಿದರ್ಶನವಾಗಿದೆ. ಈ ಬಗ್ಗೆ ಅಪಪ್ರಚಾರದಲ್ಲಿ ನಿರತವಾಗಿದ್ದ ಬಿಜೆಪಿ ಇನ್ನಾದರೂ ಮೌನದಿಂದ ಇರುವುದನ್ನು ಕಲಿಯಬೇಕು ಎಂದಿದ್ದಾರೆ. ರಾಜ್ಯ ಸರಕಾರವು ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರದ ಬಳಿಕ ಮಾತನಾಡಿದ ಅವರು, ಸರಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ವಾರಗಳಲ್ಲಿ ನಮ್ಮ ಇಚ್ಛಾಶಕ್ತಿಯನ್ನು ತೋರಿಸಿದ್ದೇವೆ.
ಈ ಐದೂ ಗ್ಯಾರಂಟಿಗಳ ಅನುಷ್ಠಾನದ ಮೂಲಕ ರಾಜ್ಯದ ಜನತೆಯ ಸಬಲೀಕರಣ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಕೊಟ್ಟ ಮಾತನ್ನು ಪಾಲಿಸುವುದು ಕಾಂಗ್ರೆಸ್ಸಿಗೆ ಧರ್ಮವಿದ್ದಂತೆ. ಚುನಾವಣೆಗೆ ಮುಂಚೆ ಏನನ್ನು ಹೇಳಿದ್ದೆವೋ ಅದನ್ನೀಗ ಮಾಡಿ ತೋರಿಸಿದ್ದೇವೆ. ಇವೆಲ್ಲವೂ ಈಗ ನಿಗದಿಪಡಿಸಿರುವ ದಿನಾಂಕದಿಂದ ಪೂರ್ಣಪ್ರಮಾಣದಲ್ಲಿ ಮತ್ತು ಸಮರ್ಪಕವಾಗಿ ಜಾರಿಗೆ ಬರಲಿವೆ ಎಂದು ಸಚಿವರು ಹೇಳಿದ್ದಾರೆ.