ಬೆಂಗಳೂರು: ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ ಎಂದು ಕಾಂಗ್ರೆಸ್ ಗ್ಯಾರಂಟಿ ಜಾರಿ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಹೆಚ್ ಡಿಕೆ, ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ.
ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ, ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ ಎಂದಿದ್ದಾರೆ. , ಹಾಲಿ ಮುಖ್ಯಮಂತ್ರಿಗಳು 2013-18ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ 2.75 ಲಕ್ಷದಷ್ಟು ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ.
ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತು, ಮತ ಫಸಲು ತಂದುಕೊಟ್ಟಿತು. ಮುಗ್ಧ ಯುವಜನರಿಗೆ 3,000 ಮಾಸಿಕ ಭತ್ಯೆ ಎಂದು ಗ್ಯಾರಂಟಿ ಕೊಟ್ಟಾಗ ಷರತ್ತಿನ ಬಗ್ಗೆ ನಾಲಿಗೆ ಮೌನವಾಗಿತ್ತು.
ಅದೇ ಯುವಜನರ ವೋಟಿನಿಂದ ಪಟ್ಟಕ್ಕೇರಿದ ಮೇಲೆ ‘ಪ್ರಸಕ್ತ ಸಾಲಿಗೆ ಮಾತ್ರ’ ಎನ್ನುವ ಷರತ್ತು ವಿಧಿಸಿ 24 ತಿಂಗಳಷ್ಟೇ ಭತ್ಯೆ ಎಂದಿದ್ದು ನನ್ನನ್ನು ಬಾಧಿಸಿದೆ. ಯುವಕರಿಗೆ ಟೋಪಿ ಹಾಕಿದ ‘ನಕಲಿ ಗ್ಯಾರಂಟಿ’ಗೆ ಶಾಸ್ತಿ ದೂರವಿಲ್ಲ ಎಂದು ಟೀಕಿಸಿದ್ದಾರೆ.