ಬೆಂಗಳೂರು: ಒಡಿಶಾ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಡಿಐಜಿ ಪಿ.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮಾತನಾಡಿದ ಅವರು,ಅಪಘಾತಕ್ಕೀಡಾದ ಹೌರಾ ರೈಲು ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರಟಿತ್ತು.
ಇಲ್ಲಿಂದ ಹೌರಾಗೆ 46 ಘಂಟೆಗಳ ಪ್ರಯಾಣವಾಗಿದೆ. ಈ ವೇಳೆ, ರಾತ್ರಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಮೂರು ಬೋಗಿಗಳು ಸಂಪೂರ್ಣ ಜಖಂ ಆಗಿವೆ. ಮಾಹಿತಿ ತಿಳಿದ ತಕ್ಷಣವೇ ನಿನ್ನೆ ರಾತ್ರಿಯಿಂದ ಅಲ್ಲಿಗೆ ಹೊರಡುವ ರೈಲುಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು. ಗಾಯಾಳು, ಸಾವು – ನೋವುಗಳ ಬಗ್ಗೆ ನಮ್ಮ ನಿಲ್ದಾಣಕ್ಕೆ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಸದ್ಯ ಬೆಂಗಳೂರಲ್ಲಿ ನಾಲ್ಕು ಹೆಲ್ಪ್ಲೈನ್ ಓಪನ್ ಮಾಡಲಾಗಿದೆ. ಈವರೆಗೆ ಹೆಲ್ಪ್ ಲೈನ್ಗೆ ಒಂದೂ ಕರೆ ಬಂದಿಲ್ಲ. ನಿನ್ನೆ ರಾತ್ರಿಯಿಂದಲೂ ಸಿಬ್ಬಂದಿ ಯವುದೇ ಕರೆ ಸ್ವೀಕರಿಸಿಲ್ಲ. ಜನರಲ್ ಬೋಗಿ, ರಿಸರ್ವೇಶನ್ ಬೋಗಿಗಳಿಗೆ ಹೆಚ್ಚು ಹಾನಿಯಾಗಿವೆ ಎನ್ನುವ ಮಾಹಿತಿ ಇದೆ. ಬೋಗಿಗಳಲ್ಲಿ ರಾಜ್ಯಕ್ಕೆ ಕೆಲಸ ಅರಸಿ ಬಂದವರು ಹೆಚ್ಚು ಇದ್ದರು. ಸದ್ಯಕ್ಕೆ ಕರ್ನಾಟಕದವರ ಸಾವಿನ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದರು.