ಬೆಂಗಳೂರು: ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಭಾಗ್ಯ ದೊರೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಮನೆ ಹಾಗೂ ವಿದ್ಯುತ್ ಸಂಪರ್ಕದ ಮೀಟರ್ನ ಸಂಖ್ಯೆ ಯಾರ ಹೆಸರಿನಲ್ಲೇ ಇರಲಿ ವಾಸವಿರುವ ಬಾಡಿಗೆದಾರರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.
ನಾನು ವಾಸವಿರುವ ಮನೆ ನನ್ನ ಪತ್ನಿಯ ಹೆಸರಿನಲ್ಲಿದೆ. ನಾನು ಬಾಡಿಗೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಸೌಲಭ್ಯ ದೊರೆಯಬಾರದು ಎಂಬುದು ಸರಿಯಲ್ಲ. 200 ಯೂನಿಟ್ವರೆಗೆ ವಿದ್ಯುತ್ ಬಳಕೆ ಮಾಡುವ ಎಲ್ಲರಿಗೂ ಇದರ ಪ್ರಯೋಜನ ತಲುಪಲಿದೆ ಎಂದರು.
ಕೆಲವರು ಸ್ವಯಂಪ್ರೇರಿತವಾಗಿ ಗೃಹಜ್ಯೋತಿ ಸೌಲಭ್ಯವನ್ನು ತ್ಯಾಗ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರಿ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು, ಖಾಸಗಿ ಸಂಸ್ಥೆಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಾವು ಬಳಕೆ ಮಾಡುವ ವಿದ್ಯುತ್ನ ಪ್ರಮಾಣ 150 ಯುನಿಟ್ ದಾಟುತ್ತಿಲ್ಲ ಆದರೂ ತಾವು ಗೃಹಜ್ಯೋತಿ ಸೌಲಭ್ಯವನ್ನು ಬಳಸಿಕೊಳ್ಳುವುದಿಲ್ಲ ಎಂದು ಸ್ವಯಂಪ್ರೇರಿತವಾಗಿ ಹೇಳಿದ್ದಾರೆ.
ಈ ಹಿಂದೆ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಬಹಳಷ್ಟು ಮಂದಿ ತ್ಯಾಗ ಮಾಡಿದ್ದರು. ಅದೇ ರೀತಿ ಶ್ರೀಮಂತರು, ಅನುಕೂಲಸ್ಥರು ಗೃಹಜ್ಯೋತಿ ಸೌಲಭ್ಯವನ್ನು ತ್ಯಾಗ ಮಾಡಲು ಅವಕಾಶವಿದೆ. ಸರ್ಕಾರಿ ನೌಕರರಿಗೆ 35,000 ರೂ. ಮೇಲ್ಪಟ್ಟ ವೇತನಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹವರು ಈ ರೀತಿಯ ಸೌಲಭ್ಯ ಪಡೆಯದೆ ತಮ್ಮ ತೆರಿಗೆಯ ವಿನಾಯಿತಿಗಾಗಿ ಗೃಹಜ್ಯೊತಿಯನ್ನು ತ್ಯಾಗ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.