ಬೀದರ್ (ಜೂ.03): ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 230ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಕಹಿ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗದಿರಲಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಹಂಚಿಕೊಂಡಿರುವ ಅವರು, ದುರಂತಕ್ಕೆ ಸಿಲುಕಿದ ರೈಲಿನಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ನೀಡಲಿ. ಗಾಯಾಳುಗಳಿಗೆ ಸರ್ಕಾರದಿಂದಲೇ ಉಚಿತ ಮತ್ತು ಅತ್ಯುತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ. ಘಟನೆಯಿಂದ ಧೈರ್ಯ ಕಳೆದುಕೊಂಡ ಪ್ರತಿಯೊಬ್ಬರಿಗೂ ಧೈರ್ಯ ತುಂಬುವ ಕೆಲಸವಾಗಲಿ ಎಂದಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರನ್ನು ರಕ್ಷಿಸಿ ರಾಜ್ಯಕ್ಕೆ ಕರೆ ತರುವ ಕೆಲಸ ಮತ್ತು ಧೈರ್ಯ ತುಂಬುವ ಕೆಲಸ ನಮ್ಮ ರಾಜ್ಯ ಸರ್ಕಾರ ಮಾಡಲಿ. ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರು ಈ ದುರಂತವನ್ನು ಗಂಭೀರವಾಗಿ ಪರಿಗಣಿಸಲಿ. ಇಂಥ ಕಹಿ ಘಟನೆ ಮುಂದೆ ಎಂದು ಕೂಡ ಸಂಭವಿಸದಿರಲಿ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.