ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು (Fake Notes)ಬದಲಾಯಿಸೋ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಆರ್ಬಿಐ(RBI) 2 ಸಾವಿರ ನೋಟ್ ಬ್ಯಾನ್ ಮಾಡಿದ್ದನ್ನೇ ಅಸ್ತ್ರವಾಗಿಸಿಕೊಂಡ ವಂಚಕರು. ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿದ್ದರು. ಅದರಂತೆ ಆರೋಪಿಗಳಾದ ಮಹಾರಾಷ್ಟ್ರದ ಓರ್ವ ಪೊಲೀಸ್(Police) ಸೇರಿ ಮೂವರನ್ನ ಬಂಧಿಸಲಾಗಿದೆ. 500 ರೂ. ಮುಖ ಬೆಲೆಯ 5 ಲಕ್ಷ ನೋಟು ಕೊಟ್ಟು, 2 ಸಾವಿರ ಮುಖ ಬೆಲೆಯ 6 ಲಕ್ಷ ಪಡೆಯರಿ ಎಂದು ಹೇಳಿ, ನಕಲಿ ನೋಟು ತೋರಿಸಿ ಜನರನ್ನ ನಂಬಿಸಿ ಮೋಸ ಮಾಡುತ್ತಿದ್ದರು. ಇದೀಗ ಖದೀಮರನ್ನ ಬಂಧಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀರ್ ಭೋಸಲೆ ಎಂಬುವವರನ್ನ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕರೆಸಿ, 500 ರೂ. ಮುಖ ಬೆಲೆಯ 5 ಲಕ್ಷ ಹಣವನ್ನ ಪಡೆದು ಎಸ್ಕೇಪ್ ಆಗಿದ್ದರು. ಹೌದು 5 ಲಕ್ಷ ರೂಪಾಯಿ ಕೈಗೆ ಸಿಗುತ್ತಿದ್ದಂತೆ ಪೋಲಿಸರು ಬಂದ್ರು, ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಚಾರ ಗೊತ್ತಾಗಿ ಅಖಾಡಕ್ಕಿಳಿದಿದ್ದ ಕಾಗವಾಡ ಪೊಲೀಸರು. ಘಟನೆ ನಡೆದ 24 ಗಂಟೆ ಒಳಗೆ ಮಹಾರಾಷ್ಟ್ರದ ಮಿರಜ್ ಠಾಣೆಯ ಪೊಲೀಸ್ ಸಾಗರ ಜಾಧವ್, ಆರೀಫ್, ಲಕ್ಷ್ಮಣ ನಾಯಕ್ ಎಂಬುವವರನ್ನ ಬಂಧಿಸಲಾಗಿದ್ದು, ಬಂಧಿತರಿಂದ 120ಕ್ಕೂ ಅಧಿಕ ಬಂಡಲ್ ನಕಲಿ ನೋಟು, ಒಂದು ಲಕ್ಷ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.