ಮಂಗಳೂರು: ಕೆಎಸ್ಆರ್ಟಿಸಿ ಬಸ್ಗಳಲ್ಲಿ (KSRTC Bus) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಯನ್ನು(Shakti Scheme) ಜೂನ್ 11ರಿಂದ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಕರಾವಳಿ ಕರ್ನಾಟಕ ಭಾಗದ ಖಾಸಗಿ ಬಸ್ ನಿರ್ವಾಹಕರನ್ನು ಚಿಂತೆಗೀಡು ಮಾಡಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿರುವುದು ಖಾಸಗಿ ಬಸ್ಗಳಿಗೆ ಹೊರೆಯಾಗುವ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳ ಸಂಖ್ಯೆಯೇ ಹೆಚ್ಚಿದೆ. ಸರ್ಕಾರದ ಯೋಜನೆಯಿಂದ ಖಾಸಗಿ ಬಸ್ಗಳ ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡೀಸೆಲ್ ಸಬ್ಸಿಡಿ ರೂಪದಲ್ಲಿ ಪರಿಹಾರ ನೀಡುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರು ನಗರವೊಂದರಲ್ಲೇ ಸುಮಾರು 328 ಬಸ್ಗಳನ್ನು ಖಾಸಗಿ ನಿರ್ವಾಹಕರು ನಡೆಸುತ್ತಿದ್ದು, 68 ಬಸ್ಗಳು ಗ್ರಾಮಾಂತರ ಪ್ರದೇಶದಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಆಧಾರದ ಮೇಲೆ ಕಾರ್ಯಾಚರಿಸುತ್ತಿವೆ. ಇಲ್ಲಿ ಖಾಸಗಿ ಬಸ್ ನಿರ್ವಾಹಕರೊಂದಿಗೆ ಕೆಎಸ್ಆರ್ಟಿಸಿ ನೇರ ಪೈಪೋಟಿ ನಡೆಸುತ್ತಿದೆ.ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾದರೆ, ತಮ್ಮ ಆದಾಯದ ಪ್ರಮುಖ ಮೂಲವಾಗಿರುವ ಮಹಿಳೆಯರು ಸರ್ಕಾರಿ ಬಸ್ಗಳಲ್ಲೇ ತೆರಳಬಹುದು ಎಂದು ಖಾಸಗಿ ಬಸ್ ನಿರ್ವಾಹಕರು ಆತಂಕಕ್ಕೊಳಗಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಹೆಚ್ಚಾಗಿ ಖಾಸಗಿ ಬಸ್ಗಳನ್ನು ಅವಲಂಬಿಸಿರುವುದರಿಂದ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸುನಿಲ್ ಕುಮಾರ್ ಒತ್ತಾಯಿಸಿದ್ದರು