ಮೈಸೂರು: ಮೈಸೂರಿನಲ್ಲಿ ನಿತ್ಯವೂ ನೂರಾರು ರೋಗಿಗಳಿಗೆ ಅನುಕೂಲವಾಗುವಂತೆ 100 ಹಾಸಿಗೆಯ ಡಯಾಲಿಸಿಸ್ ಸೇವೆ ಆರಂಭಿಸಲು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ ನಿರ್ಧರಿಸಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ”ಮೈಸೂರಿನಲ್ಲಿ ಸಾಕಷ್ಟು ಮಂದಿ ಡಯಾಲಿಸಿಸ್ ಸೇವೆ ಪಡೆಯಲು ಪರದಾಡುವ ಸ್ಥಿತಿ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ 100 ಹಾಸಿಗೆ ಸೇವೆ ಆರಂಭಿಸಲು ಬೇಕಾದ ಅನುದಾನ,
ಎಲ್ಲಿಮಾಡಬಹುದು ಎಂಬುದನ್ನು ತಿಳಿಸಿದರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರಕಾರದಿಂದ ಕೊಡಿಸುತ್ತೇನೆ” ಎಂದು ತಿಳಿಸಿದರು. ”ಡಯಾಲಿಸಿಸ್ ಯಂತ್ರ ಖರೀದಿಗೆ 8 ಲಕ್ಷ ರೂ. ಬೇಕು. 20 ಯಂತ್ರ ಖರೀದಿಗೆ ಪ್ರಯತ್ನಿಸೋಣ. ಟೆಕ್ನಿಷಿಯನ್, ನರ್ಸ್ ಸಿಬ್ಬಂದಿ ನಿಯೋಜಿಸಬೇಕು. ಕೆ.ಆರ್.ಆಸ್ಪತ್ರೆ, ಪಿಕೆಟಿಬಿ, ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ನಲ್ಲಿ ಖಾಲಿ ಇರುವ ಕಟ್ಟಡವನ್ನು ಬಳಸಿಕೊಳ್ಳಲು ಸಾಧ್ಯವೇ ಪರಿಶೀಲಿಸಿ” ಎಂದು ಸೂಚಿಸಿದರು.