ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರವನ್ನು ವ್ಯಂಗ್ಯವಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರದ್ದಿನ್ನು ಐದು ವರ್ಷ ಹೋರಾಟವೇ ಅವರಿಗೆ ಇನ್ನೇನು ಕೆಲಸ ಇದೆ ಎಂದು ಪ್ರಶ್ನಿಸಿದ್ದಾರೆ. ಹೋರಾಟ.. ಹೋರಾಟ… ಗೆಲ್ಲುವವರೆಗೂ ಹೋರಾಟ ಅಂತಾ ಇನ್ನು ಬೋರ್ಡ್ ಬರೆದಿಡಬೇಕು. ಇನ್ನು ಐದು ವರ್ಷ ಅವರಿಗೆ ಕೆಲಸ ಏನೂ ಇಲ್ಲ ಎಂದರು.
ಬರೀ ಕೋಮುದ್ವೇಷ ಹರಡಿಸೋದು, ಗಲಾಟೆ, ಒಬ್ಬರ ವಿರುದ್ಧ ಎತ್ತಿಕಟ್ಟೋದು ಇಷ್ಟೇ ಬಿಜೆಪಿ ನಾಯಕರಿಗೆ ಗೊತ್ತಿರುವುದು. ಅವರು ಇದನ್ನೇ ಮಾಡಿದ್ದಾರೆ ಅವರಿಗೆ ಅಭಿವೃದ್ಧಿ ಅಂತೂ ಗೊತ್ತೇ ಇಲ್ಲ ಎಂದರು. ಎಮ್ಮೆ ಕೋಣ ಕಡಿದು ಹಾಕುವುದಾದರೆ ಹಸು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ ಎಂದರು.
ಚರ್ಚೆ ಮಾಡಲು ಸದನ ಇದೆ, ಕಾನೂನು ಅಲ್ಲಿ ತರಬೇಕು. ನಾವು ಹೇಳಿಕೆ ಕೊಟ್ಟರೆ ಕಾನೂನು ಅಂತೂ ಸದನದಲ್ಲಿ ಬರುತ್ತದೆ. ಕಾನೂನು ಸಚಿವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ. ಸಾಧಕ ಬಾಧಕ ನೋಡಿ ನಿರ್ಣಯಗಳು ಆಗುತ್ತದೆ. ಈಗ ಅವರೇನೋ ಹೇಳಿದರು, ಇವರೇನು ಖಾಲಿ ಇದ್ದಾರೆ ಅಂತಾ ತಕ್ಷಣ ಹಾಗೇ ಹೇಳಲಿಕ್ಕೆ ಆಗುವುದಿಲ್ಲ. ಅವರು ಸೋತಿದ್ದಾರೆ, ಕೆಲವರು ಗೆದ್ದಿದ್ದಾರೆ ಜನರಿಗೆ ಏನಾದರೂ ಒಳ್ಳೆಯ ಕೆಲಸ ಮಾಡಲಿ ಎಂದರು.