ಲಖನೌ: ಮದುವೆ ಸಮಾರಂಭದ ಶಾಸ್ತ್ರಗಳೆಲ್ಲ ಮುಗಿದಿದ್ದವು. ಹೊಸ ಜೋಡಿಯನ್ನು ಮನೆಗೆ ತುಂಬಿಸಿಕೊಂಡ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ನವದಂಪತಿ ಮೊದಲ ರಾತ್ರಿಯ ರಸಮಯ ಕ್ಷಣಗಳನ್ನು ಊಹಿಸುತ್ತಾ ನಾಚಿದ್ದರು. ಬೆಳಿಗ್ಗೆ ಅವರಿಬ್ಬರೂ ಎದ್ದು ಕೊಠಡಿಯಿಂದ ಹೊರಬಂದಾಗ ಕಿಚಾಯಿಸಿ ಮಜಾ ತೆಗೆದುಕೊಳ್ಳೋಣ ಎಂಬ ಕೀಟಲೆ ಉದ್ದೇಶದಿಂದ ಮನೆಯವರು ಕಾಯುತ್ತಿದ್ದರು. ಆದರೆ ಸಂಭ್ರಮದಲ್ಲಿದ್ದ ಆ ಎರಡೂ ಕುಟುಂಬಗಳಿಗೆ ಬೆಳ್ಳಂಬೆಳಿಗ್ಗೆಯೇ ಆಘಾತ ಎದುರಾಗಿತ್ತು.
ಮದುವೆಯ ರಾತ್ರಿ ಶೋಭನಕ್ಕೆಂದು ಕೊಠಡಿ ಒಳ ಸೇರಿದ ಈ ಹೊಸ ಜೋಡಿ ಜೀವಂತವಾಗಿ ಹೊರಗೆ ಬರಲೇ ಇಲ್ಲ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ಮದುವೆಯಾಗಿದ್ದ ದಂಪತಿ ಮರು ದಿನ ಶವಗಳಾಗಿ ಪತ್ತೆಯಾಗಿದ್ದಾರೆ. ಅವರ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಆದರೆ ಮದುಮಗ ಮತ್ತು ಮದುಮಗಳು ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
22 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಅವರ ಮದುವೆ ಮೇ 30ರಂದು ನಡೆದಿತ್ತು. ಮದುವೆ ರಾತ್ರಿ ಅವರಿಬ್ಬರೂ ತಮ್ಮ ಕೊಠಡಿ ಸೇರಿಕೊಂಡಿದ್ದಾರೆ. ಆದರೆ ಮರುದಿನ ಅವರು ಕಾಣಿಸಿಕೊಂಡಿದ್ದು ಶವಗಳಾಗಿ. ಮಾಹಿತಿ ಬಂದ ಬಳಿಕ ಸ್ಥಳಕ್ಕೆ ತೆರಳಿದ್ದ ಪೊಲೀಸರು ಎರಡೂ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಈ ಹಠಾತ್ ಸಾವಿನ ಸುತ್ತಲೂ ಅನುಮಾನ ವ್ಯಕ್ತವಾಗಿತ್ತು. ಶೋಭನಕ್ಕಾಗಿ ಕೊಠಡಿ ಸೇರಿದ ಇಬ್ಬರೂ ಸತ್ತಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದು ಕೊಲೆ ಇರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ ಅವರಿಬ್ಬರೂ ಒಳಗೇ ಇರುವಾಗ ಈ ರೀತಿ ಸಾಯಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿದ್ದವು. ಅಲ್ಲದೆ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆದಿರುವುದು, ಅವರು ಪ್ರತಿರೋಧ ಒಡ್ಡಿರುವುದು ಯಾವುದರ ಕುರುಹೂ ಇರಲಿಲ್ಲ. ಇದರಿಂದ ಊರಿನ ತುಂಬಾ ಅವರಿಬ್ಬರ ಸಾವಿನ ಕುರಿತು ಊಹಾಪೋಹಗಳು ಹರಿದಾಡಿದ್ದವು.
ಈಗ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ್ದು, ಎಲ್ಲ ವದಂತಿಗಳಿಗೂ ಮಂಗಳ ಹಾಡಿದೆ. ಹೊಸದಾಗಿ ಮದುವೆಯಾಗಿದ್ದ ಗಂಡ ಮತ್ತು ಹೆಂಡತಿ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ತೋರಿಸಿದೆ ಎಂದು ಎಸ್ಪಿ ಪ್ರಶಾಂತ್ ವರ್ಮಾ ಹೇಳಿದ್ದಾರೆ. ಆದರೆ ಇನ್ನೂ ಎಳೆಯ ವಯಸ್ಸಿನ ಇಬ್ಬರೂ ಒಟ್ಟಿಗೆ ಹೃದಯಾಘಾತಕ್ಕೆ ಒಳಗಾಗುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಿದೆ.