ದಾವಣಗೆರೆ: ನೂತನ ಕಾಂಗ್ರೆಸ್ (Congress) ಸರ್ಕಾರದ ಮೊದಲ ರಾಜ್ಯ ಬಜೆಟ್ (Budget) ಅಧಿವೇಶನ ಜುಲೈ 3 ರಿಂದ ಆರಂಭವಾಗಲಿದ್ದು, 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದಾರೆ. ಜುಲೈ ಮೊದಲ ವಾರ ಬಜೆಟ್ ಅಧಿವೇಶನ ಕೈಗೊಳ್ಳಲು ನಿರ್ಧರಿಸಲಾಗಿದ್ದು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ದಾವಣಗೆರೆಯ ಎಂಬಿಎ ಹೆಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಜೆಟ್ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತದೆ. ಬಜೆಟ್ ಅಧಿವೇಶನವು ಜುಲೈ 3 ರಿಂದ ಆರಂಭವಾಗಲಿದ್ದು ಬಜೆಟ್ ಮಂಡನೆಯನ್ನು ಜುಲೈ 7 ಶುಕ್ರವಾರ ಮಂಡಿಸಲು ವಿವಿಧ ಹಂತದ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರೈತರಿಗೆ ಬಿತ್ತನೆ ಬೀಜ, ಕೀಟನಾಶಕಗಳ ಪೂರೈಕೆಯಲ್ಲಿ ಲೋಪವಾಗದಂತೆ ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದರು. ಈ ವೇಳೆ ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದು, ಇದಕ್ಕೆ ಪೂರಕವಾದ ಸಿದ್ಧತೆ ಕೈಗೊಳ್ಳಿ. ರೈತರಿಗೆ ಕೃಷಿಗೆ ಪೂರಕವಾದ ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ವಿತರಣೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಿ ಮತ್ತು ಆಕಸ್ಮಿಕ ಅತೀವೃಷ್ಟಿ ತಡೆಗೂ ಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.