ಬೆಂಗಳೂರು: ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ 2023ರ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಷ್ಯ ಪ್ರಕೃತಿಯ ಅವಿಭಾಜ್ಯ ಅಂಗ.
ಪ್ರಕೃತಿ ನಾಶ ನಮ್ಮ ನಾಶ. ಹೀಗಾಗಿ ಪ್ರಕೃತಿಯ ಜತೆಗೆ ನಾವು ಬೆಳೆಯಬೇಕು, ಬಾಳಬೇಕು ಎಂದರು. ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ10 ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ.
ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ಆದರೆ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತನ್ನು ಅನಗತ್ಯ ದುರ್ಬಳಕೆ-ದುಂದುವೆಚ್ಚ- ದುರುಪಯೋಗ ಮಾಡಲು ಕುಮ್ಮಕ್ಕು ಕೊಡುತ್ತಿದೆ. ಇದು ಅತ್ಯಂತ ಜನವಿರೋಧಿಯಾದದ್ದು. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದು ಹೇಳಿದ್ದಾರೆ.