ಮಂಡ್ಯ :- ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಬಾರ್ ಸಪ್ಲೇಯರ್ ಓರ್ವ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ಪಟ್ಟಣದ ನಂಜಪ್ಪ ಕಲ್ಯಾಣ ಮಂಟಪದ ಬಳಿ ಮಂಗಳವಾರ ಬೆಳಿಗ್ಗೆ ಜರುಗಿದೆ. ರಾಮನಗರ ಜಿಲ್ಲೆ ಕನಕಪುರದ ಹತ್ತಲು ಗ್ರಾಮದ ನಾಗೇಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿರುವ ಶಿಂಷಾ ಬಾರ್ ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಮಂಗಳವಾರ ಬೆಳಿಗ್ಗೆ ನಂಜಪ್ಪ ಕಲ್ಯಾಣ ಮಂಟಪದ ಬಳಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಶ್ವ ಮಾನವ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಸಂಬಂಧ ರೈಲ್ವೆ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದು ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿ ಸೋಮವಾರ ಸಂಜೆ ಜರುಗಿದೆ. ಗೆಜ್ಜಲಗೆರೆಯ ಲೇಟ್ ಶಿವಕುಮಾರ್ ಪುತ್ರ ಭರತ್ ಕುಮಾರ್ (21) ಮೃತ ಬೈಕ್ ಚಾಲಕನಾಗಿದ್ದಾನೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಭರತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮತ್ತೊಂದು ಬೈಕ್ ನ ಚಾಲಕ ಪ್ರಜ್ವಲ್ ಗೌಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವೃತ್ತಿಯಲ್ಲಿ ಗೂಡ್ಸ್ ಟೆಂಪೋ ಚಾಲಕನಾಗಿರುವ ಭರತ್ ಕುಮಾರ್ ತನ್ನ ಜಮೀನಿಗೆ ತನ್ನ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿದ್ದನು. ಕೈಗಾರಿಕಾ ಪ್ರದೇಶದ ಹಿಂಭಾಗದ ಮೊಬ್ಬಳಗೆರೆ ರಸ್ತೆಯಲ್ಲಿ ಪ್ರಜ್ವಲ್ ಗೌಡ ಚಾಲನೆ ಮಾಡುತ್ತಿದ್ದ ಬೈಕ್ ನೇರವಾಗಿ ಭರತ್ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ