ದಾವಣಗೆರೆ: ನನ್ನ ಕುಟುಂಬಕ್ಕೆ ಉಚಿತ ಯೋಜನೆ ಬೇಡ, ಬಡವರಿಗೆ ಸಿಗಲಿ ಎಂದು ಹೊನ್ನಾಳಿಯ ಬಿಜೆಪಿ (BJP) ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (M.P.Renukacharya) ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಂಡೀಷನ್ ಹಾಕದೇ ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನರ ಕಿವಿಗೆ ಹೂವು ಇಡುವುದು ಸರಿಯಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಗ್ಯಾರಂಟಿ ಯೋಜನೆಗಳನ್ನು ಭರವಸೆಯನ್ನಾಗಿ ನೀಡಿ ಜನರನ್ನು ಮರಳು ಮಾಡಿದ್ದಾರೆ. ಈಗ ಎಲ್ಲದಕ್ಕೂ ಷರತ್ತು ವಿಧಿಸುವುದು ಸರಿಯಲ್ಲ. ಚುನಾವಣೆಗೆ ಮುಂಚೆ ಷರತ್ತು ಹೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಈಗಲೂ ಕೂಡ ಯಾವುದೇ ಶರತ್ತು ಹಾಕದೇ ಯೋಜನೆ ಜಾರಿ ಮಾಡಿ ಎಂದು ಆಗ್ರಹಿಸಿದರು.
ಕರೆಂಟ್ ಬಿಲ್, ಅನ್ನಭಾಗ್ಯ, ಬಸ್ ಪ್ರಯಾಣ ಎಲ್ಲದಕ್ಕೂ ಷರತ್ತು ಹಾಕುತ್ತಿದ್ದೀರಿ. ಕೊಟ್ಟು ಮಾತು ಉಳಿಸಿಕೊಳ್ಳಿ. ವಚನ ಭ್ರಷ್ಟರಾಗಬೇಡಿ. ಕೇಂದ್ರ ಸರ್ಕಾರ ಈಗ 5 ಕೆಜಿ ಅಕ್ಕಿ ಕೊಡುತ್ತಿದೆ. ಅದನ್ನ ಬಿಟ್ಟು ನೀವು 10 ಕೆಜಿ ಕೊಡಿ. ಗೃಹ ಲಕ್ಷ್ಮಿ ಯೋಜನೆ ಕೊಟ್ಟು ಅತ್ತೆ ಸೊಸೆಗೆ ಜಗಳ ತಂದಿಟ್ಟಿದ್ದೀರಿ. ಈಗಾಗಲೇ ಮನೆಗಳಲ್ಲಿ ಅತ್ತೆ-ಸೊಸೆ ಗಲಾಟೆ ಶುರುವಾಗಿದೆ. ಬಾಡಿಗೆ ಇದ್ದ ಮನೆಗೂ ಯಾವುದೇ ಷರತ್ತು ಇಲ್ಲದೆ ಕರೆಂಟ್ ಫ್ರೀ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಆ ಬಸ್ ಇಲ್ಲ, ಈ ಬಸ್ ಫ್ರೀ ಇಲ್ಲ ಎಂದು ಕಂಡೀಷನ್ ಹಾಕಿದ್ದೀರಿ. ಚುನಾವಣೆಗೆ ಮುಂಚೆಯೇ ಎಸಿ ಬಸ್ ಇಲ್ಲ ಎಂದು ಹೇಳಿದ್ದೀರಾ? ಹಾಲಿಗೆ ಪ್ರೋತ್ಸಾಹ ಧನ ಕಡಿತ ಮಾಡಿದ್ದೀರಿ. ಜನರ ಮೇಲೆ ಹೆಚ್ಚಿನ ತೆರಿಗೆ ಹಾಕಬೇಡಿ. ತೆರಿಗೆ ಹೆಚ್ಚು ಹಾಕಿ ಬೆಲೆ ಏರಿಕೆ ಮಾಡಿ ಪಾಕಿಸ್ತಾನ, ಶ್ರೀಲಂಕಾ ಬರ್ಬಾದ್ ಆಗೋ ತರ ಆಗೋದು ಬೇಡ. ನೀವು ಘೋಷಣೆ ಮಾಡಿದ ಯೋಜನೆಗಳು ಬಡವರಿಗೆ ಸಿಗಲಿ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.