ಬೆಂಗಳೂರು: ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಕಾಂಗ್ರೆಸ್ನ ಉಚಿತ ಗ್ಯಾರಂಟಿಗಳ ಬಗ್ಗೆ ಮಾತನಾಡುವಾಗ ಚುನಾವಣೆಯಲ್ಲಿ ಗೆಲ್ಲಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯುಲಾರಿಟಿ ಮಾಡಬೇಕಾಗುತ್ತದೆ ಎಂದು ಹೇಳಿರುವುದು ಕಾಂಗ್ರೆಸ್ಗೆ ಇರಿಸು ಮುರಿಸು ತಂದಿದೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಂತಾಗಿದ್ದು, ಮುಂದಿನ ಚುನಾವಣೆಗಳಲ್ಲಿ ಇದನ್ನೇ ಅಸ್ತ್ರವನ್ನಾಗಿಸುವ ಸಾಧ್ಯತೆ ಇದೆ.
ಮಾಧ್ಯಮದವರೆ ಜೊತೆ ಮಾತನಾಡುವಾಗಲೇ ಚೆಲುವರಾಯಸ್ವಾಮಿ ಈ ಹೇಳಿಕೆಯನ್ನು ನೀಡಿದ್ದು, ಈಗ ಆ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನೋಡುವುದಾದರೆ, ಮೊದಲಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ದೇಶದಲ್ಲೆಲ್ಲಾ ಚರ್ಚೆಯಾಯಿತು. ನಾವು ಕೂಡ ಚರ್ಚೆ ಮಾಡಿದೇವು. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮುಂದೆ ಫ್ರೀ ಫ್ರೀ ಅಂತ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದರ ಬಗ್ಗೆ ಚರ್ಚೆಯಾಯಿತು ಎಂದಿದ್ದಾರೆ.
ಅಷ್ಟೇ ಅಲ್ಲದೇ, ಈಗ ನಾವುಗಳು ಕೂಡ ಅದೇ ಲೈನ್ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಪ್ರಮುಖ ಆಯ್ತು. ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಅವತ್ತಿಗೆ ಚುನಾವಣಾ ಫಲಿತಾಂಶ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ ಎಂದು ಹೇಳಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಚಲುವರಾಯಸ್ವಾಮಿ ಹೇಳಿಕೆ ವೈರಲ್ ವಿಚಾರಕ್ಕೆ ಸಂಬಂಧಿಸಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾನು ಗಿಮಿಕ್ ಅಂತಾ ಹೇಳಿಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸುತ್ತಿದ್ದೇವೆ. ಬಿಜೆಪಿಯವರಿಗೆ ಜಾಲತಾಣದಲ್ಲಿ ವೈರಲ್ ಮಾಡುವುದೇ ಕೆಲಸ ಆಗಿದೆ. ಬಿಜೆಪಿಗೆ ವೈರಲ್ ಮಾಡೋದು ಬಿಟ್ಟು ಬೇರೆ ಕೆಲಸ ಮಾಡಲು ಹೇಳಿ ಎಂದು ಇಜ್ಜಲಘಟ್ಟ ಗ್ರಾಮದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.