ಬೆಂಗಳೂರು: ಅನೈತಿಕ ಪೊಲೀಸ್ ಗಿರಿಗೆ ರಾಜ್ಯದಲ್ಲಿ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಯಲಹಂಕದಲ್ಲಿ ಮಾತನಾಡಿದ ಅವರು, ಅನೈತಿಕ ಪೊಲೀಸ್ ಗಿರಿಗೆ ರಾಜ್ಯದಲ್ಲಿ ಅವಕಾಶ ಇಲ್ಲ.
ಈ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ. ಅಲ್ಲದೆ, ಪ್ರತಿಯೊಂದು ಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲ್ಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ನುಡಿದರು.
ಸಂವಿಧಾನದ ಆಶಯದಂತೆ ಸರ್ವರನ್ನೂ ಒಳಗೊಳ್ಳುವ ಸರಕಾರ ನಮ್ಮದು. ನಮ್ಮ ಸರಕಾರ ಸರ್ವರಿಗೂ ಸಮಪಾಲು ಎನ್ನುವ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ ಎಂದ ಅವರು, ನಮ್ಮ ಸರಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಸಮಸ್ತರಿಗೆ ಅನ್ವಯ ಆಗುತ್ತದೆ. ಎಲ್ಲ ಧರ್ಮ, ಎಲ್ಲ ಜಾತಿ-ಸಮುದಾಯಗಳ ಅರ್ಹ ಫಲಾನುಭವಿಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಾರೆ ಎಂದು ನುಡಿದರು