ಬೆಂಗಳೂರು: ಸರ್ಕಾರದಿಂದ ಯಾರಿಗೆ ಒಂದು ರೂಪಾಯಿ ಹಣ ಕೊಟ್ಟರೂ ಅದಕ್ಕೆ ಲೆಕ್ಕ, ಹೊಣೆಗಾರಿಕೆ ಇರಬೇಕು. ಫಲಾನುಭವಿ ಆಗುವವರು ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹೊಂದಿರಬೇಕು. ಬೇರೆಯವರ ಬ್ಯಾಂಕ್ ಖಾತೆಗೆ ಹಣ ನೀಡಲಾಗುವುದಿಲ್ಲ.
ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು. ಅವರ ಮನೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಮತದಾರರ ಗುರುತಿನಿ ಚೀಟಿ, ಎಪಿಎಲ್, ಬಿಪಿಎಲ್ ಕಾರ್ಡ್ ಗಳಲ್ಲಿ ಯಾವ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ಮಾಹಿತಿ ಇದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡುತ್ತಾ ಗೃಹಲಕ್ಷ್ಮಿ ಗೆ ಕಂಡಿಷನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾವು ಸರ್ಕಾರ ನಾವು ತೀರ್ಮಾನ ಮಾಡುವುದಾಗಿ ಹೊಸ ವರಸೆ ತೆಗೆದರು.
ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ವೋಟರ್ ಐಡಿ (Voter ID), ಆಧಾರ್ ಕಾರ್ಡ್ (Adhar Card) ಇರಬೇಕು. ಅವರದ್ದೇ ಬ್ಯಾಂಕ್ ಅಕೌಂಟ್ ಇರಬೇಕು. ನಮ್ಮ ಬಳಿ ಎಲ್ಲಾ ದಾಖಲೆ ಇದೆ. ಮನೆ ಯಜಮಾನಿ ಅವರೇ ತೀರ್ಮಾನ ಮಾಡಬೇಕು. ಟ್ಯಾಕ್ಸ್ ಕೊಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ. ನನಗೆ ಅನೇಕ ಜನ ಪತ್ರ ಬರೆದಿದ್ದಾರೆ. ಅದೆಲ್ಲವನ್ನೂ ಹೇಳೋಕೆ ಆಗುತ್ತಾ? ಟ್ಯಾಕ್ಸ್ ಕಟ್ಟೋರು ಯಾರೂ ಬಂದು ಕೇಳಲ್ಲ ಎಂದರು.
ಬಿಜೆಪಿ, ಜನತಾ ದಳದವರಿಗೆ ಈ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನಮ್ಮ ಯೋಜನೆ ಬಗ್ಗೆ ಮಾತನಾಡುವವರು ಮೊದಲು ಬಿಜೆಪಿಯವರ ಉದ್ಯೋಗ ಭರವಸೆ ಬಗ್ಗೆ ಮಾತಾಡಲಿ. ಎಲ್ಲರ ಖಾತೆಗೆ 15 ಲಕ್ಷ ಹಾಕಿಸಲಿ. ಆ ಬಗ್ಗೆ ಯಾಕೆ ಯಾರೂ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ?
ತೆರಿಗೆ ಪಾವತಿದಾರರು ನಿಮಗೆ ಮತ ಹಾಕಿಲ್ಲವೇ ಎಂದು ಕೇಳಿದಾಗ, ‘ನಾವು ಬಡವರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ. ತೆರಿಗೆ, ಜಿಎಸ್ಟಿ ಪಾವತಿದಾರರು ಈ ಯೋಜನೆ ಬೇಕು ಎಂದು ಕೇಳುತ್ತಿಲ್ಲ. ಅನೇಕರು ಈ ಯೋಜನೆ ಬೇಡ ಎಂದು ನಮಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಗ್ಯಾರಂಟಿ ವಿಚಾರದಲ್ಲಿ ಬಾಡಿಗೆ ಮನೆಯವರ ಬಗ್ಗೆ ಅಧಿಕಾರಿಗಳು ಒಂದು ಆಯಾಮ ನೀಡಿದ್ದರು. ಆದರೆ ನಾವು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ’ ಎಂದು ಹೇಳಿದರು.