ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಇನ್ನೂ ಸಹ ಒಂದು ತಿಂಗಳು ಕಳೆದಿಲ್ಲ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೋಮುಭಾವನೆ ಕೆರಳುವಂತ ವಿಷಯಗಳ ಮೇಲೆ ರಾಜಕೀಯ ಗುದ್ದಾಟ ಶುರು ಮಾಡಿವೆ. ಅದರಲ್ಲೂ ಬಿಜೆಪಿ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರಕ್ಕೆ ಕೈ ಹಾಕಿದ ಬೆನ್ನಲ್ಲೆ ಗದಗನಲ್ಲಿ ಇಂದು, ಗೋ ಪೂಜೆ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಶ್ರೀರಾಮಸೇನೆ ಇಳಿದಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಕಾಂಗ್ರೆಸ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ.
ಗದಗ ನಗರದ ಪಂಜರಪೋಳಾ ಮಹಾವೀರ ಗೋಶಾಲೆಯಲ್ಲಿ ಶ್ರೀರಾಮಸೇನೆ ಕಾರ್ತಕರ್ತರು ಗೋಪೂಜೆ ನೆರವೇರಿಸಿದರು. ಗೋವಿಗೆ ಮಾಲೆ ಹಾಕಿ, ಬೆಲ್ಲ ತಿನ್ನಿಸಿ ಗೋಪೂಜೆ ಮಾಡುವ ಮೂಲಕ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಶ್ರೀರಾಮಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ್ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಈ ವೇಳೆ ಕಾಯ್ದೆ ವಾಪಾಸ್ ಪಡೆದರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಶ್ರೀರಾಮಸೇನೆ ಕಾರ್ಯಕರ್ತರು ನೀಡಿದ್ರು.