ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ನೀಡಿ ಬೆಂಗಳೂರಿನ 1ನೇ ಹೆಚ್ಚುವರಿ ತ್ವರಿತಗತಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್. ರೂಪಾ, ಬೆಂಗಳೂರು ನಗರದ ನಿವಾಸಿ ಪ್ರಬೀರ್ ಅದಕ್ ಅಲಿಯಾಸ್ ಗಣೇಶ್ ಅದಕ್ ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಪ್ರಕರಣದಲ್ಲಿ ಸಾಕ್ಷಿದಾರರ ಸಾಕ್ಷ್ಯ ಪರಿಗಣಿಸಿದ ವಿಶೇಷ ನ್ಯಾಯಾಲಯ, ಪ್ರಬೀರ್ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ ಎಂದು ತಿಳಿಸಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಪೊಲೀಸರ ಪರ ಸರ್ಕಾರಿ ಅಭಿಯೋಜಕಿ ಪಿ.ಕೃಷ್ಣವೇಣಿ ಅವರು ಪ್ರಬಲ ವಾದ ಮಂಡಿಸಿದ್ದರು.