ಭಾರತದ ಪ್ರತಿಭಾವಂತ ಶಾಟ್ ಪೂಟರ್ ಸಿದ್ಧಾರ್ಥ್ ಚೌಧರಿ ದಕ್ಷಿಣ ಕೊರಿಯಾದ ಯೆಚೊಯಾನ್ ನಲ್ಲಿ ನಡೆಯುತ್ತಿರುವ ಏಷ್ಯಾನ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದರೆ, ಡಿಸ್ಕಸ್ ಥ್ರೋನಲ್ಲಿ ಭಾರತದ ಸುನೀಲ್ ಕುಮಾರ್ (38.79 ಮೀಟರ್) ಸ್ವರ್ಣ ಪದಕ ತಮ್ಮದಾಗಿಸಿಕೊಂಡು ದೇಶಕ್ಕೆ 4 ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
17 ವರ್ಷದ ಭಾರತದ ಯುವ ಶಾಟ್ ಪೂಟರ್ ಸಿದ್ಧಾರ್ಥ್ ಚೌಧರಿ ಪದಕದ ಸುತ್ತಿನಲ್ಲಿ 3ನೇ ಪ್ರಯತ್ನದಲ್ಲಿ 19.52 ಮೀಟರ್ ಶಾಟ್ ಪುಟ್ ಎಸೆದು ಸ್ವರ್ಣ ಪದಕ ಗೆದ್ದು ಈ ಹಿಂದೆ 19.11 ದೂರ ಎಸೆದು ತಾವೇ ನಿರ್ಮಿಸಿದ್ದ ದಾಖಲೆ ಮುರಿದು ಸಂಭ್ರಮಿಸಿದ್ದಾರೆ. ಕತಾರ್ ನ ಜಿಬ್ರಿನ್ ಅಡೌಮ್ ಅಹ್ಮತ್ (18.85 ಮೀ) ಹಾಗೂ ದಕ್ಷಿಣ ಕೊರಿಯಾದ ಪಾರ್ಕ್ ಸಿಹೂನ್ (18.70 ಮೀ) ಕ್ರಮವಾಗಿ 2 ಮತ್ತು 3ನೇ ಸ್ಥಾನ ಅಲಂಕರಿಸಿದ್ದಾರೆ.
ಭಾರತದ ಅಥ್ಲೆಟಿಕ್ ಗಳಿಂದ ಪದಕಗಳ ಬೇಟೆ
ಜೂನ್ 4 ರಿಂದ 7ರವರೆಗೂ ನಡೆಯಲಿರುವ ಏಷ್ಯಾನ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ 2ನೇ ದಿನ ಭಾರತದ ಅಥ್ಲೆಟಿಕ್ಸ್ ಗಳು ಭರ್ಜರಿ ಪದಕಗಳ ಬೇಟೆಯಾಡಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ಜಾವೆಲಿಯನ್ ವಿಭಾಗದಲ್ಲಿ 72.34 ಮೀಟರ್ ಭರ್ಜಿ ಎಸೆಯುವ ಮೂಲಕ ಶಿವಂ ಲೊಹಕರೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಪುರುಷರ 3000 ಮೀಟರ್ ಸ್ಟೇಪಲ್ ಚೇಸ್ ನಲ್ಲಿ ಶಾರುಖ್ ಖಾನ್ 8:51:74 ಸೆಕೆಂಡ್ ಗಳಲ್ಲೇ ಗುರಿ ಮುಟ್ಟಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ ಉದ್ದ ಜಿಗಿತದಲ್ಲಿ ಸುಶ್ಮಿತಾ 5.96 ಮೀಟರ್ ಜಿಗಿದು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದರು.
4X400 ಮೀಟರ್ ಮಿಕ್ಸ್ಡ್ ರಿಲೇಯಲ್ಲಿ ಪಾಲ್ಗೊಂಡಿದ್ದ ದೀಪಕ್ ಸಿನ್ಹ, ಅನುಷ್ಕಾ ಕುಂಬಾರ್, ನವಪ್ರೀತ್ ಸಿಂಗ್ , ಹೀನಾ ಮಲಿಕ್ ಅವರು 3:20.129 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರೆ, ಶ್ರೀಲಂಕಾದ ಅಥ್ಲಿಟ್ ಗಳು ಸ್ವರ್ಣ ಪದಕ ಹಾಗೂ ದಕ್ಷಿಣ ಕೊರಿಯಾದ ಓಟಗಾರರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
800 ಮೀಟರ್ ಓಟದ ವಿಭಾಗದಲ್ಲಿ ಭಾರತದ ಶಕೀಲ್ 1:49:79 ನಿಮಿಷದಲ್ಲಿ ಅಂತಿಮ ಗೆರೆ ಮುಟ್ಟುವ ಮೂಲಕ ಕಂಚಿನ ಪದಕ, 5000 ಮೀಟರ್ ಓಟದಲ್ಲಿ ಅಂತಿಮ್ ಪಾಲ್ (17:17:117 ನಿಮಿಷ) ಕಂಚಿನ ಪದಕವನ್ನು ಕೊರಳಿಗೆ ಧರಿಸಿಕೊಂಡರು.
ಚಾಂಪಿಯನ್ ಷಿಪ್ ನ ಮೊದಲ ದಿನ ನಡೆದ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಹೀನಾ ಮಲಿಕ್ (53.31 ಸೆಕೆಂಡ್) ಚಿನ್ನದ ಪದಕ, ಡಿಸ್ಕಸ್ ಥ್ರೋನಲ್ಲಿ ಭರತ್ ಪ್ರೀತ್ ಸಿಂಗ್(55.66 ಮೀಟರ್) ಸ್ವರ್ಣ ಗೆದ್ದು ಸಂಭ್ರಮಿಸಿದರು.