ಎರಡು ದಿನಗಳ ಹಿಂದೆ ಅದ್ದೂರಿಯಾಗಿ ಹಸೆಮಣೆ ಏರಿದ್ದ ನಟ ಅಭಿಷೇಕ್ ಹಾಗೂ ಅವಿವಾ ಅವರ ಆರತಕ್ಷತೆ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ನಡೆದಿದ್ದು ಅರಮನೆ ಮೈದಾನ ಸುಂದರವಾಗಿ ಸಿಂಗಾರಗೊಂಡಿದೆ. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸುತ್ತಿದ್ದು ಇದೀಗ ಸ್ವತಃ ನಟಿ ಹಾಗೂ ಸಂಸದೆ ಸಮಲತ ಮಗನ ಆರತಕ್ಷತೆಗೆ ಆಗಮಿಸುವಂತೆ ವಿಶೇಷಚೇತನ ಅಭಿಮಾನಿಗೆ ಆಹ್ವಾನಿಸಿದ್ದಾರೆ.
ಧಾರವಾಡದ ವಿಶೇಷಚೇತನ ಹೆಣ್ಣುಮಗಳು ತಾವು ಸುಮಲತಾ ಅವರ ಅಭಿಮಾನಿಯಾಗಿದ್ದು,ಅಂಬರೀಶ್ ಮತ್ತು ಸುಮಲತಾr ಫೋಟೋಗಳನ್ನು ಕತ್ತರಿಸಿ ಪುಸ್ತಕದಲ್ಲಿ ಅಂಟಿಸಿರುವುದಾಗಿ ಮತ್ತು ಸುಮಲತಾ ಅವರನ್ನು ಭೇಟಿ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದರು. ಚುನಾವಣೆ ಮತ್ತು ಇತರ ಬಿಡುವಿಲ್ಲದ ಕೆಲಸದಿಂದಾಗಿ ಈವರೆಗೂ ಅಭಿಮಾನಿಯನ್ನು ಸುಮಲತಾ ಖುದ್ದಾಗಿ ಭೇಟಿ ಮಾಡಲು ಆಗಿರಲಿಲ್ಲ. ಫೋನ್ ನಲ್ಲಿ ಮಾತನಾಡಿದ್ದರು. ಇದೀಗ ಖುದ್ದಾಗಿ ಪುತ್ರನ ಆರತಕ್ಷತೆಗೆ ಬರುವಂತೆ ಆಹ್ವಾನ ಪತ್ರಿಕೆಯನ್ನು ಅಭಿಮಾನಿಗೆ ನೀಡಿದ್ದಾರೆ ಸುಮಲತಾ.
ಧಾರವಾಡದ ಸೌಭಾಗ್ಯ ಯಮನೂರು ಎನ್ನುವ ಹೆಣ್ಣು ಮಗುವಿಗೆ ಸುಮಲತಾ ಅಂಬರೀಶ್ ಖುದ್ದಾಗಿ ಆಹ್ವಾನ ಪತ್ರಿಕೆ ನೀಡಿ ಅಭಿಷೇಕ್ –ಅವಿವಾ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ಹಾಗಾಗಿ ಇಂದು ತಂದೆ ನಿಗೋಜಿ ಯಮನೂರು ಮತ್ತು ತಾಯಿಯೊಂದಿಗೆ ಬೆಂಗಳೂರಿಗೆ ಆಗಮಿಸಿ, ಹಲವು ವರ್ಷಗಳ ಕನಸನ್ನು ಸುಮಲತಾ ಅವರನ್ನು ನೋಡುವ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ. ಸುಮಲತಾ ಅವರಿಗಾಗಿ ಧಾರವಾಡದ ವಿಶೇಷ ಸೀರೆ ಮತ್ತು ಪೇಡಾವನ್ನು ಉಡುಗೊರೆಯಾಗಿ ನೀಡಲಿದ್ದಾರಂತೆ ಸೌಭಾಗ್ಯ.