ಬೆಂಗಳೂರು: NEP ರದ್ದುಗೊಳಿಸುವ ಕುರಿತು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಾನು ಉನ್ನತ ಶಿಕ್ಷಣ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಬಳಿಕ, ಇಲಾಖೆ ವತಿಯಿಂದ ಶಿಕ್ಷಣ ನೀತಿ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಇದರ ಸಾಧಕ ಭಾದಕದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು ನಿರ್ಧಾರಿಸಲಾಗಿದೆ. ಅದರ ಭಾಗವಾಗಿ ಹಿರಿಯರನ್ನು ಕರೆದು ಚರ್ಚೆ ಮಾಡುತ್ತೇವೆ. ಈ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಭೆ ಮಾಡಿದಾಗ ಯಾರೆಲ್ಲಾ ಭಾಗಿಯಾಗಿದ್ದರೋ ಅವರ ಜೊತೆ ನಾವು ಚರ್ಚೆ ಮಾಡಲಿದ್ದೇವೆ ಎಂದು ಸುಧಾಕರ್ ಹೇಳಿದರು.
ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ರಾಂತ ಕುಲಪತಿಗಳ ನಿಯೋಗವು ಬಂದಿತ್ತು. ಅವರಿಂದಲೂ ಅಭಿಪ್ರಾಯ ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಬಂದು ಒಂದು ವರ್ಷವಾಗಿದೆ. ಅದರ ಬಗ್ಗೆ ಪ್ರಾಧ್ಯಾಪಕರ ಬಳಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.