ಚೆನ್ನೈ: ದಲಿತರಿಗೆ ದೇವಸ್ಥಾನ ಪ್ರವೇಶ ವಿಚಾರವಾಗಿ ಘರ್ಷಣೆಗಳ ವರದಿಯಾಗುತ್ತಿರುತ್ತದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ದ್ರೌಪದಿ ಅಮ್ಮನವರ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಮೇಲ್ವರ್ಗ ಹಾಗೂ ದಲಿತರ ನಡುವಿನ ಸಂಘರ್ಷ ಮುಂದುವರೆದಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದೇವಸ್ಥಾನಕ್ಕೆ ಬೀಗ ಜಡಿದಿದ್ದಾರೆ.
ಇಲ್ಲಿ ದಲಿತ- ಮೇಲ್ವರ್ಗದ ಸಂಘರ್ಷ ಇದೇ ಮೊದಲೇನಲ್ಲ. ಏಪ್ರಿಲ್ನಲ್ಲಿ ಒಮ್ಮೆ ಇದೇ ರೀತಿ ವಿದ್ಯಮಾನ ನಡೆದಿತ್ತು. ದೇವಸ್ಥಾನವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧೀನದಲ್ಲಿದೆ. ಬಿಕ್ಕಟ್ಟು ನಿವಾರಿಸಲು ಜಿಲ್ಲಾಡಳಿತದಿಂದ ಹಲವು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಸಿಗಲಿಲ್ಲ.
ಈ ವರ್ಷದ ಏಪ್ರಿಲ್ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೇವಾಲಯಕ್ಕೆ ಪ್ರವೇಶಿಸಿದ್ದರು. ಇದನ್ನು ಪ್ರಬಲ ಜಾತಿಯವರು ವಿರೋಧಿಸಿದರು. ಇದಾದ ನಂತರ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಿದರು. ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಅಂದಿನಿಂದ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ನಾಲ್ಕು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಹಾಗಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಅಧಿಕಾರಿಗಳು ದೇವಸ್ಥಾನಕ್ಕೆ ಮೊಹರು ಹಾಕಿದ್ದಾರೆ. ಈ ಮಧ್ಯೆ, ವಿಲ್ಲುಪುರಂ ಸಂಸದ ಡಿ.ರವಿಕುಮಾರ್ ಅವರು ಎಲ್ಲಾ ಪಕ್ಷದ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಿ.ಪಳನಿ ಅವರಿಗೆ ಮನವಿ ಸಲ್ಲಿಸಿದರು. ಯಾವುದೇ ಜಾತಿ ಪಕ್ಷಪಾತವಿಲ್ಲದೆ ಎಲ್ಲಾ ಭಕ್ತರನ್ನು ದೇವಾಲಯದ ಒಳಗೆ ಬಿಡಬೇಕು ಎಂದು ಒತ್ತಾಯಿಸಿದರು.