ಲಕ್ನೋ: ಗ್ಯಾಂಗ್ಸ್ಟರ್ (Gangster) ಮುಕ್ತರ್ ಸಹಚರನನ್ನು ಕೋರ್ಟ್ನ (Court) ಕೊಠಡಿಯಲ್ಲೇ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಕೈಸರ್ಬಾಗ್ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದೆ. ವಕೀಲರ (Lawyer) ವೇಷದಲ್ಲಿ ಬಂದ ಹಂತಕರು ಏಕಾಏಕಿ ಗ್ಯಾಂಗ್ಸ್ಟರ್ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನೆಲಕ್ಕೆ ಕುಸಿದ ಆತನ ರಕ್ತಸ್ರಾವವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಪಟ್ಟಿದ್ದಾರೆ. ಆದರೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಕಾಲಿಗೆ ಗುಂಡು ತಗುಲಿದೆ. ಈ ಕೊಲೆ ಪ್ರಕರಣದಲ್ಲಿ ಎಷ್ಟು ಜನ ಶೂಟರ್ಗಳು ಇದ್ದರು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ದಾಳಿಕೋರರು ರಿವಾಲ್ವರ್ ಹಿಡಿದುಕೊಂಡು ನ್ಯಾಯಾಲಯದ ಆವರಣಕ್ಕೆ ಹೇಗೆ ಪ್ರವೇಶಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ದಾಳಿಕೋರರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಮೃತ ಸಂಜೀವ್ ಜೀವಾ ಪಶ್ಚಿಮ ಯುಪಿಯಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಅಲ್ಲದೇ ಉತ್ತರಾಖಂಡ (Uttarakhand) ಹಾಗೂ ಉತ್ತರ ಪ್ರದೇಶದಲ್ಲಿ (Uttar Pradesh) ಆತನ ವಿರುದ್ಧ ಕನಿಷ್ಠ 50 ಕ್ರಿಮಿನಲ್ ಪ್ರಕರಣಗಳಿವೆ. ಆತ ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಎಂದು ತಿಳಿದು ಬಂದಿದೆ.