ಚಾಮರಾಜನಗರ: ಉಪ ಸಭಾಪತಿಯಾಗಲು (Deputy Speaker) ಶಾಸಕ ಪುಟ್ಟರಂಗಶೆಟ್ಟಿ (Puttarangashetty) ಕೊನೆಗೂ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ (Congress) ಸರ್ಕಾರದ ಸಂಪುಟ ರಚನೆ ವೇಳೆ ಚಾಮರಾಜನಗರ (Chamarajanagar) ಶಾಸಕ ಪುಟ್ಟರಂಗಶೆಟ್ಟಿಗೆ ಉಪ ಸಭಾಪತಿ ಸ್ಥಾನ ನೀಡಲಾಗಿತ್ತು. ಈ ವೇಳೆ ನನಗೆ ನಿಭಾಯಿಸಲು ಕಷ್ಟವಾಗುತ್ತೆ, ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲ್ಲ ಎಂದು ಪುಟ್ಟರಂಗಶೆಟ್ಟಿ ತಿಳಿಸಿದ್ದರು. ಆದರೆ ಇದೀಗ ಅವರು ಯೂ ಟರ್ನ್ ಹೊಡೆದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ನಾನು ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ.
ಒಂದು ವರ್ಷದ ನಂತರ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ಕೊಡುವ ಬಗ್ಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು, ವರಿಷ್ಠರು ಹೇಳಿದ್ದನ್ನು ಒಪ್ಪಿಕೊಳ್ಳಲೇ ಬೇಕು. ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರವಾದರೂ ಹೇಳಿಕೊಳ್ಳಲು ಆಗಲ್ಲ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಒಂದು ವರ್ಷ ಕೆಲಸ ಮಾಡು ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ ಎಂದು ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.