ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಕಸರತ್ತು ಜೋರಾಗ್ತಿದೆ. ಸಾಲು- ಸಾಲು ಮೀಟಿಂಗ್ ಗಳು ನಡೆಯುತ್ತಿದ್ದು ಜಾತಿಯ ಮಾನದಂಡದ ಮೇಲೆ ಸ್ಥಾನಮಾನ ಪೈನಲ್ ಆಗಲಿದೆ. ನೂತನ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿದ ಕೇಸರಿ ನಾಯಕರು ಸೋಲಿನ ಆತ್ಮಾವಲೋಕನ ನಡೆಸಿದ್ರು, ಇದೇ ವೇಳೆ ಶಾಸಕರಿಂದ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವೈಯಕ್ತಿಕ ಅಭಿಪ್ರಾಯ ಪಡೆಯಲಾಯ್ತು….
ರಾಜ್ಯ ಬಿಜೆಪಿ ನಾಯಕರು ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸಾಲು- ಸಾಲು ಆತ್ಮಾವಲೋಕನ ಸಭೆಗಳನ್ನು ನಡೆಸಿ ಸೋಲಿಗೆ ಕಾರಣಗಳನ್ನು ಹುಡುಕಿದ್ರು. ಈ ಸಭೆಗಳು ಪ್ರಮುಖ ನಾಯಕರ ಮಧ್ಯೆ ಮಾತ್ರ ನಡೆದಿತ್ತು ಇಂದು ನೂತನ ಶಾಸಕರು ಸೇರಿದಂತೆ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಿದ್ರು. 2 ವಿಭಾಗಗಳಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಗೆದ್ದ ನೂತನ 66 ಶಾಸಕರ ಸಭೆಯನ್ನ ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಸಿಎಂ ಗಳಾದ ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಲಾಯ್ತು ಈ ವೇಳೆ ಮೊದಲಿಗೆ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಆ ನಂತರ ಸೋಲಿನ ಪರಾಮರ್ಶೆ ನಡೆಸಲಾಯ್ತು..
ಇದಾದ್ಮೇಲೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆಯನ್ನ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ನಡೆಸಲಾಯ್ತು. ಈ ಸಭೆಯಲ್ಲಿ ಸೋತ ಪ್ರಮುಖರಾದ ಬಿ.ಸಿ ನಾಗೇಶ್, ಎಂಟಿಬಿ ನಾಗರಾಜ್, ಸಿ.ಪಿಯೋಗೇಶ್ವರ್, ಪ್ರೀತಮ್ ಗೌಡ, ಮುರುಗೇಶ್ ನಿರಾಣಿ , ನಾರಾಯಣ್ ಗೌಡ, ಬಿ.ಸಿ ಪಾಟೀಲ್, , ಮಹೇಶ್ ಕುಮಟಹಳ್ಳಿ, ಪಿ.ರಾಜೀವ್, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ಹಾಲಪ್ಪ ಆಚಾರ್, ಅಪ್ಪಚ್ಚು ರಂಜನ್, ಗೋವಿಂದ ಕಾರಜೋಳ ಸೇರಿದಂತೆ ಬಹುತೇಕ ನಾಯಕರು ಭಾಗಿಯಾಗಿದ್ರು. ಆದ್ರೆ ಚುನಾವಣೆಯಲ್ಲಿ ಸೋತ ಪ್ರಭಾವಿ ನಾಯಕಾರಾದ ಮಾಜಿ ಸಚಿವರುಗಳಾದ ಡಾ. ಸುಧಾಕರ್, ವಿ.ಸೋಮಣ್ಣ, ನಾರಾಯಣಗೌಡ ಗೈರಾದ್ರು. ಈ ಸಭೆಯಲ್ಲಿಯೂ ವೈಯಕ್ತಿಕವಾಗಿ ಅಭ್ಯರ್ಥಿಗಳಿಂದ ಸೋಲಿನ ಕಾರಣಗಳನ್ನ ಪಡೆಯಲಾಯ್ತು….
ಇನ್ನು ಬಿಜೆಪಿ ಸೋಲಿಗೆ ಎಲ್ಲರೂ ಕೊಟ್ಟ ಪ್ರಮುಖ ಕಾರಣಗಳು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಎಫೆಕ್ಟ್, ಮೀಸಲಾತಿ, ಒಳಮೀಸಲಾತಿ ಎಫೆಕ್ಟ್, ಪಕ್ಷದ ಆಂತರಿಕ ಸಂಘರ್ಷ, ಕಾರ್ಯಕರ್ತರ ಕಡೆಗಣನೆ ಹಾಗೂ ಕೈಕೊಟ್ಟ ಒಕ್ಕಲಿಗ, ಲಿಂಗಾಯತ ಓಟ್ ಬ್ಯಾಂಕ್. ಇನ್ನು ಇದೇ ವೇಳೆ ಪಕ್ಷ ಸಂಘಟನೆ ಹಾಗೂ ಮುಂದಿನ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ, ಲೋಕಸಭಾ ಚುನಾವಣಾ ತಯಾರಿ ಬಗ್ಗೆಯೂ ಚರ್ಚೆ ನಡೆಸಲಾಯ್ತು..
ಈಗಾಗ್ಲೆ ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ , ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಜೋರಾಗ್ತಿದೆ. ಇದಕ್ಕಾಗಿ ಸಾಲು- ಸಾಲು ಸಭೆಗಳು ನಡೆದಿವೆ ಈ ಹಿನ್ನೆಲೆಯಲ್ಲಿ ಇಂದು ನೂತನ ಶಾಸಕರಿಂದ ಈ ಆಯ್ಕೆ ಪ್ರಕ್ರಿಯೆಗಾಗಿ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಯ್ತು. ಜಾತಿಯ ಮಾನದಂಡದ ಮೇಲೆ ಸ್ಥಾನಮಾನ ಫೈನಲ್ ಮಾಡಲಾಗ್ತಿದ್ದು ವಿಪಕ್ಷ ನಾಯಕ ಸ್ಥಾನ ಲಿಂಗಾಯತ, ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಅಂತ ನಿರ್ಧರಿಸಲಾಗಿದೆ.
ವಿಪಕ್ಷ ಸ್ಥಾನದ ರೇಸ್ ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿಂದೂ ಪೈಯರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಇದ್ರೆ ರಾಜ್ಯಾಧ್ಯಕ್ಷ ರ ರೇಸ್ ನಲ್ಲಿ ಮಾಜಿ ಸಚಿವರಾದ ಸಿಟಿ ರವಿ, ಡಾ. ಅಶ್ವಥ್ ನಾರಾಯಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಈ ಮಧ್ಯೆ ರಾಜ್ಯಾಧ್ಯಕ್ಷರ ರೇಸ್ ಗೆ ಹಿಂದುಳಿದ ಸಮುದಾಯದ ಮಾಜಿ ಸಚಿವ ಸುನೀಲ್ ಕುಮಾರ್ ಹೆಸರು ಸಹ ಕೇಳಿ ಬರ್ತಿದೆ…
ಎಲ್ಲವೂ ಅಂದುಕೊಂಡತೆ ಆಗಿದ್ರೆ ಇಂದೇ ವಿಪಕ್ಷ ನಾಯಕನ ಆಯ್ಕೆ ಫೈನಲ್ ಆಗ್ಬೇಕಿತ್ತು ಆದ್ರೆ ಕೋರ್ ಕಮಿಟಿ ಸಭೆ ಮುಂದೂಡಿದ್ರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗ್ತಿದೆ. ಮುಂದಿನ 2-3 ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಅಂತಿಮವಾಗಲಿದ್ದು. ಅದಾದ್ಮೇಲೆ ಕೇಸರಿ ಪಡೆಯ ಸಾರಥಿಯ ಆಯ್ಕೆ ನಡೆಯಲಿದೆ, ಸದ್ಯ ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಗಿದ್ದು ಕೋರ್ ಕಮಿಟಿಯ ಸಭೆ ಆದ್ಮೇಲೆ ಹೈಕಮಾಂಡ್ ಅಂಗಳದಲ್ಲಿ ಎಲ್ಲವೂ ಡಿಸೈಡ್ ಆಗಲಿದೆ….