ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳು ಶಿಕ್ಷಣದಲ್ಲಿ ಯಾವಾಗಲೂ ನಂಬರ್ ಒನ್.. ಅದೇ ರೀತಿ ಕೋಮು ಸಂಘರ್ಷದ ವಿಚಾರದಲ್ಲೂ ಪ್ರಥಮ ಸ್ಥಾನದಲ್ಲೇ ನಿಲ್ಲುತ್ತೆ.. ಕೋಮು ಗಲಭೆಗಳು, ಹತ್ಯೆಗಳು, ಉಗ್ರರ ಸಂಚು, ನೈತಿಕ ಪೊಲೀಸ್ಗಿರಿ.. ಇತ್ಯಾದಿ ವಿಚಾರಗಳಿಂದಲೇ ಹಲವು ಬಾರಿ ಮಂಗಳೂರು ಸುದ್ದಿಯಲ್ಲಿ ಇರುತ್ತೆ.. ಇದೀಗ ಈ ನಗರಕ್ಕೆ ಹೊಸದೊಂದು ಪೊಲೀಸ್ ದಳ ಬರಲಿದೆ.
ಅದರ ಹೆಸರು ಕೋಮುವಾದ ನಿಗ್ರಹ ದಳ..! ರಾಜ್ಯದಲ್ಲೇ ಮೊದಲ ಬಾರಿಗೆ ಇಂಥಾದ್ದೊಂದು ದಳವನ್ನ ಮಂಗಳೂರಿನಲ್ಲಿ ಸ್ಥಾಪನೆ ಮಾಡೋಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಆ್ಯಂಟಿ ಕಮ್ಯುನಲ್ ವಿಂಗ್ ರಚನೆ ಮಾಡೋಕೆ ನಿರ್ಧರಿಸಿದ್ದೇವೆ ಅಂತಾ ಹೇಳಿದ್ದಾರೆ.. ಹಾಗಾದ್ರೆ ಈ ದಳದ ಕೆಲಸ ಏನು? ಕೋಮುವಾದ ನಿಗ್ರಹಕ್ಕೆ ಈ ದಳ ಏನು ಮಾಡುತ್ತೆ? ಇಲ್ಲಿದೆ ಡೀಟೇಲ್ಸ್..
ಕೋಮುವಾದ ನಿಗ್ರಹ ದಳದ ಕೆಲಸ ಏನು..?
ಮಂಗಳೂರು ಹೇಳಿ ಕೇಳಿ ಕೋಮು ಸಂಘರ್ಷದಿಂದಲೇ ಕುಖ್ಯಾತಿ ಪಡೆದಿರೋ ನಗರ.. ಇತ್ತೀಚೆಗಷ್ಟೇ ಉಳ್ಳಾಲದಲ್ಲಿ ನೈತಿಕ ಪೊಲೀಸ್ ಗಿರಿ ಕೂಡಾ ನಡೆದಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೋಮುವಾದ ನಿಗ್ರಹ ದಳವನ್ನ ಸ್ಥಾಪನೆ ಮಾಡೋದಾಗಿ ಹೇಳಿದ್ದಾರೆ. ಈ ದಳದ ಕೆಲಸ ಏನು ಅನ್ನೋ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಕೋಮು ಸೌಹಾರ್ದತೆ ಕದಡೋದನ್ನ ನಿಯಂತ್ರಣ ಮಾಡಲು ನಾವು ಈ ದಳ ರಚನೆ ಮಾಡ್ತಿದ್ದೇವೆ ಎಂದಿದ್ದಾರೆ. ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಅನೇಕ ಘಟನೆಗಳು ನಡೆಯುತ್ತಿರೋ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೋಮುವಾದ ನಿಗ್ರಹ ದಳ ಅಸ್ತಿತ್ವಕ್ಕೆ ಬರಲಿದೆ ಅನ್ನೋದು ಪರಮೇಶ್ವರ್ ಸ್ಪಷ್ಟನೆ.
ಹಾಗೆ ನೋಡಿದ್ರೆ ರಾಜ್ಯದಲ್ಲಿ ಎಲ್ಲಿಯೂ ಕೂಡಾ ಇಂಥಾದ್ದೊಂದು ದಳ ಇಲ್ಲ. ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕೋಮುವಾದ ನಿಗ್ರಹ ದಳ ರಚನೆ ಆಗಲಿದೆ. ಅಗತ್ಯಬಿದ್ದರೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ದಳವನ್ನ ವಿಸ್ತರಣೆ ಮಾಡ್ತೇವೆ ಅನ್ನೋದು ಪರಮೇಶ್ವರ್ ಅವರ ವಿವರಣೆ.. ಈ ದಳ ಕೇವಲ ಕೋಮುವಾದ ನಿಗ್ರಹ ಮಾತ್ರವಲ್ಲ ಸೈಬರ್ ಕ್ರೈಂ ಹಾಗೂ ಕ್ರಿಮಿನಲ್ ಚಟುವಟಿಕೆಗಳ ಮೇಲೂ ಕಣ್ಣಿಟ್ಟಿರುತ್ತೆ ಅಂತಾ ಪರಮೇಶ್ವರ್ ಹೇಳಿದ್ದಾರೆ.
ಕೋಮುವಾದ ನಿಗ್ರಹ ದಳದ ರಚನೆ ಹೇಗೆ..?
ನೀವು ನಕ್ಸಲ್ ನಿಗ್ರಹ ದಳ, ರೌಡಿ ನಿಗ್ರಹ ದಳದ ಹೆಸರುಗಳನ್ನ ಕೇಳಿರ್ತೀರಿ.. ಇದೀಗ ಕೋಮುವಾದ ನಿಗ್ರಹ ದಳ ಕೂಡಾ ಅದೇ ರೀತಿ ಅಸ್ತಿತ್ವಕ್ಕೆ ಬರಲಿದೆ. ಸಾಮಾನ್ಯವಾಗಿ ರೌಡಿ ನಿಗ್ರಹ ದಳಕ್ಕೆ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಗಳು ನೇತೃತ್ವ ವಹಿಸಿರುತ್ತಾರೆ. ಇವರ ಅಡಿಯಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 25 ಪೊಲೀಸರು ಕೆಲಸ ಮಾಡ್ತಾರೆ. ಈ ಹಿಂದೆ ಮಂಗಳೂರಿನಲ್ಲಿ ರೌಡಿ ನಿಗ್ರಹ ದಳ ಅಸ್ತಿತ್ವದಲ್ಲಿ ಇತ್ತು.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನ 3 ಭಾಗವಾಗಿ ವಿಭಜನೆ ಮಾಡಿ ಮೂರು ರೌಡಿ ನಿಗ್ರಹ ದಳ ಸ್ಥಾಪನೆ ಮಾಡಿ ಮೂವರು ಎಸಿಪಿಗಳನ್ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಇದೀಗ ಈ ರೌಡಿ ನಿಗ್ರಹ ದಳ ಇಲ್ಲ. ಆದ್ರೆ, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಕೋಮುವಾದಿ ನಿಗ್ರಹ ದಳವನ್ನ ರೌಡಿ ನಿಗ್ರಹ ದಳದ ರೀತಿಯಲ್ಲೇ ರಚನೆ ಮಾಡ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಅಥವಾ ಇಡೀ ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನು ಒಳಗೊಂಡಂತೆ ಒಂದೇ ದಳ ರಚನೆ ಮಾಡ್ತಾರಾ ಅನ್ನೋ ಪ್ರಶ್ನೆಯೂ ಇದೆ.
ಈ ಕುರಿತಾಗಿ ಗೃಹ ಸಚಿವ ಪರಮೇಶ್ವರ್ ಅವರು ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಆದರೆ, ಆ್ಯಂಟಿ ಕಮ್ಯುನಲ್ ವಿಂಗ್ ರಚನೆ ಮಾಡೋಕೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಈ ದಳಕ್ಕೆ ಹಾಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಬಳಕೆ ಮಾಡಿಕೊಳ್ತೇವೆ ಎಂದಿದ್ದಾರೆ. ಕೋಮುವಾದ ನಿಗ್ರಹ ದಳದ ರೂಪುರೇಷೆಯನ್ನ ಮಂಗಳೂರು ಕಮೀಷನರ್ ನಿರ್ಧಾರ ಮಾಡಲಿದ್ದಾರೆ. ಈ ದಳದ ಮುಖ್ಯಸ್ಥರು ಕಮೀಷನರ್ ಅವರ ಅಧೀನದಲ್ಲಿ ಕೆಲಸ ಮಾಡಲಿದ್ದಾರೆ. ಕೋಮುವಾದ ನಿಗ್ರಹ ದಳ ರಚನೆಯಾದ ಬಳಿಕ ಅದರ ಪೂರ್ಣ ಸ್ವರೂಪ ಗೊತ್ತಾಗಲಿದೆ.
ಕೋಮುವಾದ ನಿಗ್ರಹ ಘಟಕದ ರೂಪುರೇಷೆ ವಿವರಿಸಿದ ಡಾ. ಜಿ. ಪರಮೇಶ್ವರ್
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿ ಕೋಮುವಾದ ನಿಗ್ರಹ ದಳ ರಚನೆ ಮಾಡ್ತೇವೆ ಅಂತಾ ಈಗ ಘೋಷಣೆ ಮಾಡಿದೆ. ಆದ್ರೆ, ಬಿಜೆಪಿ ನಾಯಕರು ತುಂಬಾ ಹಿಂದಿನಿಂದಲೇ ಮಂಗಳೂರಿಗೆ ಎನ್ಐಎ ಘಟಕ ಬೇಕು ಅಂತಿದ್ಧಾರೆ. ಅದರಲ್ಲೂ ಪ್ರವೀಣ್ ಹತ್ಯೆ, ಕುಕ್ಕರ್ ಬಾಂಬ್ ಸ್ಫೋಟ ಘಟನೆ ನಡೆದ ಬಳಿಕ ಮಂಗಳೂರಿಗೆ ಎನ್ಐಎ ಘಟಕ ಬೇಕು ಅನ್ನೋ ಆಗ್ರಹ ತೀವ್ರಗೊಂಡಿತ್ತು. ಎನ್ಐಎ ಅಧಿಕಾರಿಗಳು ಈಗಾಗಲೇ ಮಂಗಳೂರು,
ಭಟ್ಕಳ ಸೇರಿದಂತೆ ಕರಾವಳಿಯ ಹಲವು ನಗರ, ಪಟ್ಟಣಗಳಲ್ಲಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಗಳನ್ನೂ ನಡೆಸುತ್ತಿದ್ದಾರೆ. ಹೀಗಾಗಿ ಕೋಮು ಸೂಕ್ಷ್ಮವಾಗಿರುವ ಕರಾವಳಿ ಭಾಗದಲ್ಲಿ ಎನ್ಐಎ ಪ್ರಾದೇಶಿಕ ಘಟಕವನ್ನೇ ತೆರೆಯಬೇಕು ಅನ್ನೋದು ಬಿಜೆಪಿ ಆಗ್ರಹ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ರಾಜ್ಯದ ನಾಯಕರು ಆಗ್ರಹ ಮಾಡಿದ್ದಾರೆ. ಮಂಗಳೂರು ಪೊಲೀಸರು ಹಾಗೂ ಎನ್ಐಎ ತಂಡ ಒಟ್ಟಿಗೇ ಕೆಲಸ ಮಾಡಿದರೆ ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ಕಾಪಾಡಬಹುದು ಅನ್ನೋದು ಬಿಜೆಪಿ ವಾದ.
ಆಳುವ ಪಕ್ಷಗಳ ಅಸ್ತ್ರವಾಗದಿರಲಿ ತನಿಖಾ ಸಂಸ್ಥೆಗಳು!
ಪೊಲೀಸರು ಇನ್ಮುಂದೆ ಸರಿಯಾಗಿ ನಡೆದುಕೊಳ್ಳಬೇಕು ಅಂತಾ ತಾಕೀತು ಮಾಡಿದ್ದಾರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್.. ಪೊಲೀಸ್ ಇಲಾಖೆಯಲ್ಲಿ ಕೇಸರೀಕರಣ ಆಗಿದೆ ಅನ್ನೋ ಆರೋಪಗಳ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರ ಮಾತುಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆ.. ಹಾಗಾದ್ರೆ, ಈಗ ಮಂಗಳೂರಿನಲ್ಲಿ ರಚನೆಯಾಗೋ ಕೋಮುವಾದ ನಿಗ್ರಹ ದಳ ಯಾವ ರೀತಿ ಕೆಲಸ ಮಾಡುತ್ತೆ? ಯಾವುದೇ ಒಂದು ವರ್ಗ, ಸಮುದಾಯವನ್ನ ಗುರಿಯಾಗಿಸದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದ್ದು ಪೊಲೀಸರ ಧರ್ಮ..
ಇದೇ ಧರ್ಮ ಮುಂದುವರೆಯಬೇಕಿದೆ. ನ್ಯಾಯೋಚಿತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕಿದೆ. ಯಾಕಂದ್ರೆ, ಕೇಂದ್ರದ ತನಿಖಾ ಸಂಸ್ಥೆಗಳಾದ ಎನ್ಐಎ, ಸಿಬಿಐ ವಿರುದ್ಧ ಕಾಂಗ್ರೆಸ್ ನಾಯಕರೇ ರಾಷ್ಟ್ರ ಮಟ್ಟದಲ್ಲಿ ಆರೋಪ ಮಾಡ್ತಿದ್ದಾರೆ. ಆಳುವ ಪಕ್ಷದ ಅಧೀನದಲ್ಲಿ ಈ ಸಂಸ್ಥೆಗಳು ಇವೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಅನ್ನೋದು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳ ಆರೋಪ. ಹೀಗಾಗಿ, ಮುಂದಿನ ದಿನಗಳಲ್ಲಿ ಕೋಮುವಾದ ನಿಗ್ರಹ ದಳಕ್ಕೂ ಇದೇ ಕಳಂಕ ಅಂಟಿಕೊಳ್ಳೋದು ಬೇಡ ಅನ್ನೋದೇ ಎಲ್ಲರ ಆಶಯ.
ಇದಕ್ಕೆ ಪೂರಕವಾದ ಘಟನೆಗಳು ಈಗಾಗಲೇ ಮಂಗಳೂರಿನಲ್ಲಿ ನಡೆದು ಹೋಗಿವೆ. ತೀರಾ ಇತ್ತೀಚಿನ ಉದಾಹರಣೆಯನ್ನೇ ನೋಡೋದಾದ್ರೆ, ಉಳ್ಳಾಲದಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಹಲ್ಲೆಗೀಡಾದ ಯುವಕರಿಗೇ ಪೊಲೀಸರು ಕಿರುಕುಳ ಕೊಟ್ಟರು ಅನ್ನೋ ಆರೋಪ ಕೇಳಿ ಬಂತು. ಕರಾವಳಿ ಭಾಗದಲ್ಲಿ ಈ ರೀತಿಯ ಪರ – ವಿರೋಧ ಆರೋಪಗಳು ಸಹಜವೇ… ಆದರೆ, ಈ ರೀತಿಯ ಅಪವಾದಗಳು ಬಂದಾಗ ಪೊಲೀಸರ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತೆ, ಒತ್ತಡ ಎದುರಾಗುತ್ತೆ ಅನ್ನೋದು ಕೂಡಾ ಸತ್ಯ..