ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) ಮೂರು ತಿಂಗಳ ಮಗುವೊಂದು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಲಸಿಕೆ ಹಾಕಿದ ಒಂದು ಗಂಟೆಯೊಳಗೆ ಮಗು ಮೃತಪಟ್ಟಿದ್ದು, ಪೋಷಕರು, ಸಂಬಂಧಿಕರು ಪ್ರತಿಭಟನೆ (Protest) ನಡೆಸಿದ್ದಾರೆ.
ಚುಚ್ಚುಮದ್ದು ಪಡೆದು ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿದೆ. ಮಗು ಅಲ್ಲಿಯವರೆಗೆ ಆರೋಗ್ಯವಾಗಿಯೇ ಇತ್ತು ಎಂದು ಆರೋಪಿಸಿ ಆಸ್ಪತ್ರೆ ಎದುರು ಮೃತ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಭೇಟಿ ನೀಡಿ ಮೃತ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಸೇರಿ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಡಾ. ಮಧು, ಸಿಬ್ಬಂದಿ ಸಾನಿಯಾ, ಮಮತಾ, ಶೋಭಾ, ಲಕ್ಷ್ಮೀದೇವಿ, ಚಂದ್ರಪ್ರಭಾ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.