ಭಾರತ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಪ್ರಸಿಧ್ ಕೃಷ್ಣ ಅವರು ಗುರುವಾರ ತಮ್ಮ ದೀರ್ಘ ಕಾಲದ ಗೆಳತಿ ರಚನಾ ಕೃಷ್ಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಸಾಂಪ್ರದಾಯದಂತೆ ಈ ಜೋಡಿ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.
ಕಳೆದ ಮಂಗಳವಾರ ಈ ಜೋಡಿ ನಿಶ್ಚಾತಾರ್ಥ ಮಾಡಿಕೊಂಡಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಕೇವಲ ಎರಡೇ ದಿನಗಳಲ್ಲಿ ಈ ಇಬ್ಬರು ವಿವಾಹವಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಜಸ್ಥಾನ್ ರಾಯಲ್ಸ್ ತಂಡ, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದೆ.
ಕರ್ನಾಟಕ ಹಾಗೂ ರಾಜಸ್ಥಾನ್ ರಾಯಲ್ಸ್ ಸಹ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ನವ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ನವ ಜೋಡಿಯ ಫೋಟೋ ವೀಕ್ಷಿಸಿದ ಅಭಿಮಾನಿಗಳು ಕರ್ನಾಟಕ ಜೋಡಿಗೆ ಶುಭ ಹಾರೈಸಿದ್ದಾರೆ.
ಪ್ರಸಿಧ್ ಕೃಷ್ಣ ವಿವಾಹವಾಗಿರುವ ರಚನಾ ಕೃಷ್ಣ ಅವರ ಬಗ್ಗೆ ಜಾಸ್ತಿ ಮಾಹಿತಿ ಇಲ್ಲ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಸೆಟ್ ಮಾಡಿಕೊಂಡಿದ್ದಾರೆ. ಅಂದಹಾಗೆ ಅವರು ಟೆಕ್ಸಾಸ್ನ ಆಸ್ಟಿನ್ನಲ್ಲಿ ನೆಲೆಸಿದ್ದು, ಡೆಲ್ ಟೆಕ್ನಾಲಜೀಸ್ ಕಂಪನಿಯಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದ ಬಳಿಕ ಕೆಲ ಅವಧಿಯವರೆಗೆ ಸಿಸ್ಕೋ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.
ಪ್ರಸಿಧ್ ಕೃಷ್ಣ ಅವರು ದೀರ್ಘಾವಧಿಯಿಂದ ಗಾಯದ ಸಮಸ್ಯೆಯಿಂದ ಹೋರಾಡುತ್ತಿದ್ದಾರೆ. ಅವರು ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ಇಲ್ಲದ ಕಾರಣ ಈ ಋತುವಿನಲ್ಲಿ ಅವರು ಆಡಲು ಸಾಧ್ಯವಾಗಿರಲಿಲ್ಲ. ಕಳೆದ ಆವೃತ್ತಿಯ (2022) ಟೂರ್ನಿಯಲ್ಲಿ ಕರ್ನಾಟಕ ವೇಗಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದೀಗ ಅವರು ಸಂಪೂರ್ಣ ಫಿಟ್ನೆಸ್ಗೆ ಮರಳಿ ರಾಷ್ಟ್ರೀಯ ತಂಡಕ್ಕೆ ಮರಳು ಎದುರು ನೋಡುತ್ತಿದ್ದಾರೆ.
ಕರ್ನಾಟಕ ಮೂಲದ ಪ್ರಸಿಧ್ ಕೃಷ್ಣ ಅವರು 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಬಲಗೈ ವೇಗಿ ಇದುವರೆಗೂ 14 ಏಕದಿನ ಪಂದ್ಯಗಳನ್ನು ಆಡಿದ್ದು, ಬೌಲಿಂಗ್ನಲ್ಲಿ 23.92ರ ಸರಾಸರಿಯಲ್ಲಿ 25 ವಿಕೆಟ್ಗಳನ್ನು ಪಡೆದಿದ್ದಾರೆ ಹಾಗೂ 5.32ರ ಎಕಾನಮಿ ರೇಟ್ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. 12ಕ್ಕೆ 4 ವಿಕೆಟ್ ಇವರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನವಾಗಿದೆ.