ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಜಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಶಾಲಾ ಪಠ್ಯದಲ್ಲಿ ಪ್ರಜಾಪ್ರಭುತ್ವ ಒಪ್ಪದ ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು. ಅವರು ಈ ದೇಶಕ್ಕೆ ಸಂಬಂಧಪಟ್ಟವರೇ ಅಲ್ಲ.
ಕಾರ್ಲ್ ಮಾರ್ಕ್ಸ್, ಮಾವೋ ಇಬ್ಬರೂ ಪ್ರಜಾಪ್ರಭುತ್ವ ವಿರೋಧಿಗಳು. ಮಾವೋವಾದಿಗಳ ಪಾಠ ಇರಬಹುದು, ಮಾರ್ಕ್ಸ್ ವಾದಿಗಳ ಪಾಠ ಇರಬಹುದು. ಆದರೆ ದೇಶಭಕ್ತ ಡಾ. ಹೆಡ್ಗೇವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಟೀಕಿಸಿದರು.
ಇನ್ನೂ ಕಾಂಗ್ರೆಸ್ ನವರು ಪಠ್ಯ ಪರಿಷ್ಕರಣೆ ಮಾಡಲಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಂತ ಏನೂ ಬೇಕಾದರೂ ಮಾಡುತ್ತೇವೆ ಎಂದರೆ ಅದಕ್ಕೂ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.