ಮುಂಬೈ: ಎನ್ಸಿಪಿ ನೇತಾರ ಶರದ್ ಪವಾರ್ (Sharad Pawar) ಶಿವಸೇನೆ ಉದ್ಧವ್ ಬಣದ ಮುಖಂಡ ಸಂಜಯ್ ರಾವತ್ಗೆ (Sanjay Raut) ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.
ವಿಚಾರವಾದಿ ನರೇಂದ್ರ ದಾಬೋಲ್ಕರ್ಗೂ ಆದ ಗತಿಯೇ ನಿಮಗೂ ಆಗಲಿದೆ ಎಂದು ಶರದ್ ಪವಾರ್ಗೆ ಟ್ವಿಟ್ಟರ್ ಮೂಲಕ ಹತ್ಯೆ ವಾರ್ನಿಂಗ್ ನೀಡಿದ್ದಾರೆ. ಇದೇ ವೇಳೆ ಪವಾರ್ ಪುತ್ರಿ, ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ವಾಟ್ಸಪ್ ನಂಬರ್ಗೆ ಪವಾರ್ ಅವರನ್ನು ಹತ್ಯೆ ಮಾಡುವುದಾಗಿ ಸಂದೇಶಗಳು ಬಂದಿವೆ.
ಈ ಬೆದರಿಕೆ ಸಂದೇಶಗಳ ಸಂಬಂಧ ತನಿಖೆ ನಡೆಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ. ಸಂಜಯ್ ರಾವತ್ರನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ರಾವತ್ ಸಹೋದರ, ಶಾಸಕ ಸುನೀಲ್ ದೂರು ನೀಡಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವೀಸ್ ಪ್ರತಿಕ್ರಿಯಿಸಿ, ಯಾವುದೇ ನಾಯಕರಿಗೆ ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.