ಚಂಡೀಗಢ: ತಮ್ಮ ಪತಿ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನವನ್ನು ಭಗವಂತ್ ಮಾನ್ (Bhagwant Mann) ಅವರಿಗೆ ಉಡುಗೊರೆಯಾಗಿ ನೀಡಿರುವುದಾಗಿ ಸಿಧು ಪತ್ನಿ ನವಜೋತ್ ಕೌರ್ (Navjot Kaur) ಹೇಳಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಮಾತಿನ ಚಕಮಕಿಯ ನಡುವೆ ಕೌರ್ ಸರಣಿ ಟ್ವೀಟ್ಗಳ ಮೂಲಕ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿಧು ಅವರಿಗೇ ಪಂಜಾಬ್ನ ಚುಕ್ಕಾಣಿ ನೀಡಲು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಬಯಸಿದ್ದರು. ಆದ್ರೆ ಸಿಧು ಅವರು ತಮ್ಮ ಪಕ್ಷಕ್ಕೆ ದ್ರೋಹ ಬಗೆಯದಿರಲು ನಿರ್ಧರಿಸಿದ್ದರು. ಹಾಗಾಗಿ ಭಗವಂತ್ ಮಾನ್ ಅವರು ಸಿಎಂ ಆದರು ಎಂದು ಪತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ಭಗವಂತ್ ಮಾನ್ ಅವರೇ ಮುಚ್ಚಿಟ್ಟ ರಹಸ್ಯವೊಂದನ್ನು ನಾನಿಂದು ಬಹಿರಂಗಪಡಿಸುತ್ತೇನೆ. ನೀವು ಇಂದು ಅಲಂಕರಿಸಿರುವ ಬಹಳ ಗೌರವಾನ್ವಿತ ಕುರ್ಚಿಯನ್ನು ನಿಮ್ಮ ಹಿರಿಯ ಸಹೋದರ ನವಜೋತ್ ಸಿಂಗ್ ಸಿಧು ಅವರು ನಿಮಗೆ ಉಡುಗೊರೆಯಾಗಿ ನೀಡಿರುವುದು. ನಿಮ್ಮದೇ ಹಿರಿಯ ನಾಯಕ ಪಂಜಾಬ್ ನಾಯಕತ್ವವನ್ನು ನವಜೋತ್ ಮುನ್ನಡೆಸಬೇಕು ಎಂದು ಬಯಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯವನ್ನ ಮುನ್ನಡೆಸಲು ಸಿಧು ಅವರನ್ನು ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.