ಮುಂಬೈ: ಇಲ್ಲಿನ ಮೀರಾ ರೋಡ್ನಲ್ಲಿರುವ ಗೀತಾ ನಗರದಲ್ಲಿ ನಡೆದ ಕೊಲೆ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲಾಗಿದೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯನ್ನೂ ಮೀರಿಸುವಂತಿರುವ ಈ ಕೇಸ್ನಲ್ಲಿ ಮತ್ತಷ್ಟು ರೋಚಕ ಮಾಹಿತಿಗಳು ಬೆಳಕಿಗೆ ಬಂದಿವೆ.
ಹೌದು. ಮುಂಬೈನಲ್ಲಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಸರಸ್ವತಿ ವೈದ್ಯ (32) (Saraswathi Vaidya) ಹಾಗೂ ಮನೋಜ್ ಸಾನೆ (56) (Manoj Sahni) ಇಬ್ಬರೂ ವಿವಾಹವಾಗಿದ್ದರು. ಆದ್ರೆ ವಯಸ್ಸಿನ ಅಂತರದಿಂದ ಹೊರಗೆ ಹೇಳಿಕೊಳ್ಳಲಾಗದೇ ಮುಚ್ಚಿಟ್ಟಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ
ಸರಸ್ವತಿ ತನ್ನ ನಾಲ್ವರು ಸಹೋದರಿಯರೊಂದಿಗೆ ಸಂಪರ್ಕದಲ್ಲಿದ್ದು, ಅವರಲ್ಲಿ ಮೂವರನ್ನ ಶುಕ್ರವಾರ ವಿಚಾರಣೆಗೆ ಒಳಪಡಿಸಿದಾಗ ಮದುವೆಯಾಗಿದ್ದ ರಹಸ್ಯ ಬಯಲಾಗಿದೆ. ಅವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ವಿಷಯವನ್ನ ತನ್ನ ಸಹೋದರಿಯರಿಗೆ ಮಾತ್ರ ತಿಳಿಸಿದ್ದರು. ವಯಸ್ಸಿನ ಅಂತರದಿಂದ ಬೇರೆಯವರಿಗೆ ಹೇಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಜಯಂತ್ ಬಬಲೆ ಮಾಹಿತಿ ನೀಡಿದ್ದಾರೆ.
ವಾಸ್ತವವಾಗಿ ಮನೋಜ್ ಸಾನೆ, ಆಕೆಯ ಚಿಕ್ಕಪ್ಪನೇ ಆಗಿದ್ದು, ಮುಂಬೈನಲ್ಲಿ ಬಟ್ಟೆ ಅಂಗಡಿ ಹೊಂದಿದ್ದ. ಅಹ್ಮದ್ನಗರದಿಂದ ಶಾಲೆ ಬಿಟ್ಟ ಸರಸ್ವತಿ ಮುಂಬೈಗೆ ತೆರಳುವುದಕ್ಕೂ ಮುನ್ನ ತನ್ನ ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ಅಲ್ಲಿ ಬೊರಿವಲಿಯ ರೇಷನ್ ಅಂಗಡಿಯಲ್ಲಿ ಮನೋಜ್ ಸಾನೆಯನ್ನ ಭೇಟಿಯಾಗಿದ್ದಳು. ಬಳಿಕ ಇಬ್ಬರು ಸ್ನೇಹಿತರಾದರು. ಸರಸ್ವತಿಗೆ ಮುಂಬೈನಲ್ಲೇ ಕೆಲಸ ಸಿಕ್ಕಿದ್ದರಿಂದ ಸಾನೆ ತನ್ನ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಟ್ಟಿದ್ದ. ಆದ್ರೆ ಮೊದಲೇ ತಾಯಿಯನ್ನು ಕಳೆದುಕೊಂಡಿದ್ದರಿಂದ ಅವರ ತಂದೆ ಸಹ ಮಕ್ಕಳನ್ನು ಬಿಟ್ಟು ಹೋಗಿದ್ದರು. ಹಾಗಾಗಿ ಸರಸ್ವತಿಯ ಸಹೋದರಿಯರು ಅನಾಥಾಶ್ರಮಗಳಲ್ಲಿ ಬೆಳೆಯಬೇಕಾಯಿತು. ಸರಸ್ವತಿ ಮಾತ್ರ ಮದುವೆಯಾಗಿ ಸಾನೆ ಮನೆಯಲ್ಲೇ ಇದ್ದಳು.
2 ವರ್ಷಗಳ ಹಿಂದೆಯೂ ಸಹೋದರಿಯನ್ನ ಭೇಟಿಯಾಗಿದ್ದಾಗ ತಾನು ತೊಂದರೆಯಲ್ಲಿರುವುದಾಗಿ ಹೇಳಿಕೊಂಡಿದ್ದಳು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿತು. ಕಳೆದ ಭಾನುವಾರ ಸರಸ್ವತಿ ವಿಷ ಸೇವಿಸಿ ಸಾವನ್ನಪ್ಪಿದಳು. ಇದರಿಂದ ಗಾಬರಿಗೊಂಡ ಸಾನೆ ದೇಹವನ್ನ ವಿಲೇವಾರಿ ಮಾಡಲು ಎಲೆಕ್ಟ್ರಿಕ್ ಗರಗಸದಿಂದ ಅನೇಕ ತುಂಡುಗಳನ್ನಾಗಿ ಕತ್ತರಿಸಿದ್ದ. ಎಷ್ಟು ತುಂಡುಗಳು ಎಂದು ಎಣಿಸಲು ನಮಗೇ ಕಷ್ಟವಾಗಿತ್ತು. ಏಕೆಂದರೆ ಕೆಲ ಭಾಗಗಳನ್ನ ಪುಡಿಪುಡಿ ಮಾಡಿ ಕುದಿಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.