ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶರಣ್ ರಾಜ್ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಚೆನ್ನೈನ ಕೆಕೆ ನಗರದಲ್ಲಿ ನಡೆದಿದೆ.
ಸಹಾಯಕ ನಿರ್ದೇಶಕ ಶರಣ್ ರಾಜ್ ಮೃತ ಸಹಾಯಕ ನಿರ್ದೇಶಕ. ರಾತ್ರಿ ಕೆಲಸ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಶರಣ್ ರಾಜ್ ಬೈಕ್ ಗೆ ಪೋಷಕ ನಟ ಪಳನಿಪ್ಪನ್ ಎನ್ನುವವರು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದಿದ್ದು ಶರಣ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಓಡಿಸುತ್ತಿದ್ದ ಪೋಷಕ ನಟ ಪಳನಿಪ್ಪನ್ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಶರಣ್ ರಾಜ್ ಬೈಕ್ ಗೆ ಕಾರು ಗುದ್ದಿದ್ದರಿಂದ ಅವರು ನೆಲಕ್ಕೆ ಉರುಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಾಗಲೇ ಶರಣ್ ರಾಜ್ ನಿಧನರಾಗಿರುವ ಕುರಿತು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಶರಣ್ ರಾಜ್ ಪ್ರತಿಭಾವಂತ ಸಹಾಯಕ ನಿರ್ದೇಶಕನಾಗಿದ್ದು, ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಕೂಡ ಮಾಡಿದ್ದಾರೆ. ದಕ್ಷಿಣದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಬಳಿ ಅನೇಕ ವರ್ಷಗಳಿಂದ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ವೆಟ್ರಿಮಾರನ್ ನಿರ್ದೇಶನದ ಧನುಷ್ ನಟನೆಯ ಅಸುರನ್ ಸಿನಿಮಾದಲ್ಲಿ ಶರಣ್ ರಾಜ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಜೊತೆಗೆ ಪಾತ್ರವೊಂದನ್ನೂ ನಿರ್ವಹಿಸಿದ್ದರು.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪಳನಿಪ್ಪನ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರವಾಗಿದೆ.