ಲಂಡನ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ವಿಶ್ವದ ನಂ. 1 ಟೆಸ್ಟ್ ಬೌಲರ್ ಆರ್ ಅಶ್ವಿನ್ಗೆ ಅವಕಾಶ ನೀಡದ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ನ ಈ ನಿರ್ಧಾರ ನನ್ನಲ್ಲಿ ದಿಗ್ಭ್ರಮೆಗೊಳಿಸಿದೆ ಎಂದು ಹೇಳಿದ್ದಾರೆ.
ಬುಧವಾರ ಲಂಡನ್ನ ದಿ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆಸ್ಟ್ರೇಲಿಯಾ ತಂಡ, ಟ್ರಾವಿಸ್ ಹೆಡ್ (146*) ಶತಕ ಹಾಗೂ ಸ್ಟೀವನ್ ಸ್ಮಿತ್ (95*) ಅವರ ಅರ್ಧಶತಕದ ಬಲದಿಂದ ಮೊದಲನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್ನಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ. ಆ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹಿನ್ನಡೆ ಅನುಭವಿಸಿದೆ.
2021-23ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಯಣದಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಚೆನ್ನೈ ಮೂಲದ ಸ್ಪಿನ್ನರ್, ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 25 ವಿಕೆಟ್ಗಳನ್ನು ಕಬಳಿಸುವ ಮೂಲಕ ಆರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂದ್ಯದ ಮೊದಲನೇ ದಿನದಾಟದ ಬಳಿಕ ಮಾತನಾಡಿದ ಸುನೀಲ್ ಗವಸ್ಕರ್, “ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆರ್ ಅಶ್ವಿನ್ ಆಡಬೇಕಾಗಿತ್ತು. ಒಂದು ವೇಳೆ ಅವರು ತಂಡದಲ್ಲಿ ಆಡಿದ್ದರೆ, ಮೊದಲನೇ ದಿನದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಯಾವುದೇ ಕಂಡೀಷನ್ಸ್ ಹೊರತಾಗಿಯೂ ವಿಶ್ವದ ಅಗ್ರ ಕ್ರಮಾಂಕದ ಬೌಲರ್ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡದೆ ಇರುವುದು ನನಗೆ ದಿಗ್ಭ್ರಮೆಗೊಳಿಸಿದೆ. ಕೊನೆಯ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿಯೂ ಅಶ್ವಿನ್ಗೆ ಅವಕಾಶ ನೀಡಿರಲಿಲ್ಲ,” ಎಂದು ಕಿಡಿ ಕಾರಿದ್ದಾರೆ.
ಇತ್ತೀಚೆಗೆ ಅಂತ್ಯವಾಗಿದ್ದ 2023ರ ಐಪಿಎಲ್ ಟೂರ್ನಿಯಲ್ಲಿ ಉಮೇಶ್ ಯಾದವ್ ಹಾಗೂ ಶಾರ್ದುಲ್ ಠಾಕೂರ್ಗೆ ಆಟದ ಸಮಯ ಜಾಸ್ತಿ ಸಿಕ್ಕಿರಲಿಲ್ಲ. ಈ ಇಬ್ಬರು ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದರು. ಉಮೇಶ್ ಯಾದವ್ ಅವರನ್ನು ಕೊನೆಯ ಪಂದ್ಯಗಳಲ್ಲಿ ಆಡಿಸಿರಲಿಲ್ಲ. ಶಾರ್ದುಲ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅಂದಹಾಗೆ ಮೊದಲನೇ ದಿನ ಉಮೇಶ್ ಯಾದವ್ 14 ಓವರ್ ಬೌಲ್ ಮಾಡಿ 54 ರನ್ಗಳನ್ನು ನೀಡಿದ್ದರು. ಆದರೆ, ಶಾರ್ದುಲ್ 18 ಓವರ್ಗಳಿಗೆ 75 ರನ್ ಕೊಟ್ಟು ಒಂದೇ ಒಂದು ವಿಕೆಟ್ ಕಬಳಿಸಿದ್ದರು.
ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಅಲೆಕ್ಸ್ ಕೇರಿ ಸೇರಿ ನಾಲ್ವರು ಎಡಗೈ ಬ್ಯಾಟ್ಸ್ಮನ್ಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಆಫ್ ಸ್ಪಿನ್ನರ್ ಅನ್ನು ಆಡಿಸಬೇಕಾಗಿತ್ತು. ಹಾಗಾಗಿ ಆರ್ ಅಶ್ವಿನ್ ಅವರನ್ನು ಕಡ್ಡಾಯವಾಗಿ ಪ್ಲೇಯಿಂಗ್ Xiನಲ್ಲಿ ಉಳಿಸಿಕೊಳ್ಳಬೇಕಾಗಿತ್ತು ಎಂದಿದ್ದಾರೆ ಗವಾಸ್ಕರ್