ಹೊಸದಿಲ್ಲಿ: ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ ಮೂರು ವರ್ಷಗಳ ಬಳಿಕ ತಮ್ಮ ಪುತ್ರ ಜೊರಾವರ್ ಅವರನ್ನು ಭೇಟಿಯಾಗಲಿದ್ದಾರೆ. ತಮ್ಮ 9 ವರ್ಷದ ಮಗನನ್ನು ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಕರೆತರುವಂತೆ ಶಿಖರ್ ಧವನ್ ಅವರ ವಿಚ್ಛೇದಿತ ಪತ್ನಿ ಆಯೆಶಾ ಮುಖರ್ಜಿಗೆ ದಿಲ್ಲಿಯ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.
ವಿಚ್ಛೇದನ ಮತ್ತು ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಈ ಇಬ್ಬರೂ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಪುತ್ರನ ಮೇಲೆ ತಾಯಿಗೆ ಮಾತ್ರ ವಿಶೇಷ ಹಕ್ಕು ಇಲ್ಲ ಎಂದು ದಿಲ್ಲಿ ಕೌಟುಂಬಿಕ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಮಗನನ್ನು ಭಾರತಕ್ಕೆ ಕರೆತರಲು ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಪಾಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರು, ಆಯೇಷಾ ಮುಖರ್ಜಿ ಅವರಿಗೆ ಛೀಮಾರಿ ಹಾಕಿದ್ದಾರೆ. 2020ರ ಆಗಸ್ಟ್ ತಿಂಗಳಿನಿಂದ ತಮ್ಮ ಮಗುವನ್ನು ನೋಡಿಲ್ಲ ಎಂದು ಶಿಖರ್ ಧವನ್ ಅವರ ಕುಟುಂಬ ನ್ಯಾಯಾಲಯಕ್ಕೆ ತಿಳಿಸಿತ್ತು.
ಪುತ್ರನನ್ನು ಭೇಟಿಯಾಗಲು ಮೊದಲಿಗೆ ಜೂನ್ 17 ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಮಗನ ಶಾಲಾ ರಜೆ ಮತ್ತು ವೇಳಾಪಟ್ಟಿಯನ್ನು ಪರಿಗಣಿಸಿ ಜುಲೈ 1ಕ್ಕೆ ಇದನ್ನು ಮುಂದೂಡಲಾಯಿತು. ಹೊಸ ದಿನಾಂಕದ ಬಗ್ಗೆ ಕುಟುಂಬ ಸದಸ್ಯರು ಸಂಪರ್ಕಿಸದ ಕಾರಣ ಇದು ಯಶಸ್ವಿಯಾಗುವುದಿಲ್ಲ ಎಂದು ಮುಖರ್ಜಿ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ನ್ಯಾಯಾಲಯ ನಿರಾಕರಿಸಿದೆ.
“2020 ರಿಂದಲೂ ಮಗುವನ್ನು ಭೇಟಿಯಾಗಲು ಅರ್ಜಿದಾರ ಮತ್ತು ಅವರ ಕುಟಂಬದ ಸದಸ್ಯರಿಗೆ ಸಾಧ್ಯವಾಗಿಲ್ಲ. ಅರ್ಜಿದಾರ ಶಿಖರ್ ಧವನ್ ಅವರ ಪುತ್ರ ತಮ್ಮ ಅಜ್ಜಿಯನ್ನು ಭೇಟಿಯಾಗಬೇಕೆಂಬ ಬಯಕೆಯನ್ನು ಅಸಮಂಜಸವೆಂದು ಕರೆಯಲಾಗುವುದಿಲ್ಲ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಮಗು ತನ್ನ ಅಜ್ಜಿಯನ್ನು ಭೇಟಿಯಾಗಬೇಕೆಂಬ ಧವನ್ ಅವರ ಆಸೆಯನ್ನು ನ್ಯಾಯಾಧೀಶರು ಎತ್ತಿ ಹಿಡಿದರು. ಭಾರತದಲ್ಲಿರುವ ಧವನ್ ಅವರ ಮನೆ ಮತ್ತು ಸಂಬಂಧಿಕರು ತಮ್ಮ ಪುತ್ರನಿಗೆ ಪರಿಚಯವಿಲ್ಲ ಎಂದು ವಿಚ್ಛೇದಿತ ಪತ್ನಿ ಮುಖರ್ಜಿ ಹೇಳಿದ್ದರು. ಆದರೆ, ಇದನ್ನು ನ್ಯಾಯಾಧೀಶರು ಅಲ್ಲಗೆಳೆದರು. ಶಾಲೆಯ ರಜೆ ದಿನಗಳಲ್ಲಿ ತಮ್ಮ ಮಗನನ್ನು ಶಿಖರ್ ಧವನ್ ಸ್ವಲ್ಪ ದಿನಗಳ ಕಾಲ ಭಾರತಕ್ಕೆ ಕರೆದೊಯ್ಯಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ.
ಕಳೆದ 2021ರಲ್ಲಿಯೇ ಈ ಜೋಡಿ ವಿಚ್ಛೇದನ ಪಡೆಯಲು ನಿರ್ಧರಿಸಿತ್ತು. ಅದರಂತೆ ಎರಡೂ ರಾಷ್ಟ್ರಗಳ ನ್ಯಾಯಾಲಯಗಳಲ್ಲಿ ವಿಚ್ಛೇದನ ಹಾಗೂ ಮಗು ಪಾಲನೆ ಕುರಿತು ಪ್ರಕ್ರಿಯೆಗಳು ನಡೆಯುತ್ತಿವೆ. ಆಯೆಶಾಗೆ ಇದು ಎರಡನೇ ವಿವಾಹ. ಇದಕ್ಕೂ ಮುನ್ನ ಅವರು ಆಸ್ಟ್ರೇಲಿಯಾದಲ್ಲಿ ಒಬ್ಬ ವ್ಯಾಪಾರಿಯನ್ನು ಮದುವೆಯಾಗಿದ್ದರು ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದರು. ಇದರ ಹೊರತಾಗಿಯೂ ಕೆಲ ಕಾರಣಗಳಿಂದ ಅವರು ವಿಚ್ಛೇದನ ಪಡೆದಿದ್ದರು. ತದ ನಂತರ ಶಿಖರ್ ಧವನ್ ಅವರನ್ನು ವಿವಾಹವಾಗಿದ್ದರು. ಧವನ್-ಆಯೆಶಾಗೆ ಜನಿಸಿದ ಪುತ್ರ ಜೊರಾವರ್. ಜೊರಾವರ್ ಅವರು ಜುಲೈ ಒಂದರಂದು ಭಾರತಕ್ಕೆ ಆಗಮಿಸಲಿದ್ದಾರೆ.