ದೊಡ್ಡಬಳ್ಳಾಪುರ: ನವ ದೊಡ್ಡಬಳ್ಳಾಪುರ ನಿರ್ಮಾಣ ಸಂಕಲ್ಪ ಹೊಂದಿದ್ದು ವಾರಕ್ಕೊಮ್ಮೆ ಹೋಬಳಿವಾರು ಜನಸ್ಪಂದನ ಸಭೆ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ಧನ್ಯವಾದ ದೊಡ್ಡಬಳ್ಳಾಪುರ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜೂ.16 ರಿಂದ ತಾಲೂಕಿನ ಪ್ರತಿ ಹಳ್ಳಿಗೆ ಭೇಟಿ ನೀಡುತ್ತೇನೆ. ವಾರಕ್ಕೊಮ್ಮೆ ಹೋಬಳಿವಾರು ನಾಡಕಚೇರಿ ಮುಂದೆ ಜನಸ್ಪಂದನ ಸಭೆ ನಡೆಸಲಾಗುವುದು. ಆಯಾ ಹೋಬಳಿ ವ್ಯಾಪ್ತಿಯ ಜನರ ಪಂಚಾಯ್ತಿ, ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಲಾಗುವುದು. ಆ ಹೋಬಳಿಯಲ್ಲಿ ಒಂದು ತಿಂಗಳಲ್ಲಿ ಮತ್ತೆ ಸಭೆ ನಡೆಸುವಷ್ಟರೊಳಗೆ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ಅದೇ ರೀತಿ ನಗರಸಭೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತೇನೆ. ತಾಲೂಕು ಪಂಚಾಯ್ತಿ ಆವರಣದಲ್ಲಿ ಶಾಸಕರ ಕಚೇರಿ ಸಿದ್ಧವಾಗುತ್ತಿದ್ದು, ವಾರದಲ್ಲಿ ಒಂದು ದಿನ ಅಲ್ಲಿಯೂ ಅಹವಾಲು ಆಲಿಸಿ, ಇತ್ಯರ್ಥಪಡಿಸಲಾಗುವುದು. ಈ ವ್ಯವಸ್ಥೆಯನ್ನು ತಾಲೂಕಿನಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಪರಿಶ್ರಮದ ಫಲವಾಗಿ ಇಂದು ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ತಂದೆಯವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಚುನಾವಣೆಯಲ್ಲಿ 31 ಸಾವಿರ ಮತಗಳ ಅಂತರದಿಂದ ಗೆಲುವು ತಂದುಕೊಟ್ಟ ಮತದಾರರು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಸಮರ್ಪಿಸಲು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಧೀರಜ್ ಮುನಿರಾಜು ಅವರು, ತಾಲೂಕಿನ ಸೇವೆ ಮಾಡಲು ಅವಕಾಶ ನೀಡಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದ ನನ್ನನ್ನು ಪಕ್ಷದ ಪ್ರತಿ ಹಂತದಲ್ಲೂ ಪರಿಚಯಿಸಿ, ಟಿಕೆಟ್ ಕೊಡಿಸಿದ ಮಾಜಿ ಸಚಿವ ಆರ್. ಅಶೋಕ್ ಅವರಿಗೆ ಆಭಾರಿಯಾಗಿರುತ್ತೇನೆ. ರಾಜಕೀಯವಾಗಿ ನನ್ನ ಪ್ರತಿ ಹೆಜ್ಜೆಗೂ ಅವರೇ ಸ್ಫೂರ್ತಿ. ನಾನು ಶಾಸಕನಾಗಿ ಆಯ್ಕೆಯಾಗಲು ಮೂಲ ಕಾರಣಕರ್ತರೇ ಆರ್. ಅಶೋಕ್ ಅವರು ಎಂದರು.
ಆರ್.ಅಶೋಕ್ ಅವರಂತೆ ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡಿ ಬೆನ್ನಿಗೆ ನಿಂತವರು ನನ್ನ ತಂದೆ ಪಿ.ಮುನಿರಾಜು ಅವರು. ಈ ಇಬ್ಬರ ಆಶೀರ್ವಾದ ಹಾಗೂ ಪಕ್ಷದ ಹಿರಿಕಿರಿಯರ ಮಾರ್ಗದರ್ಶನದಿಂದ ಇಂದು ಶಾಸಕನಾಗಿ ಅಯ್ಕೆಯಾಗಿದ್ದೇನೆ. ನನ್ನಿಂದ ಸಣ್ಣಪುಟ್ಟ ತಪ್ಪುಗಳಾದರೆ ತಿದ್ದಿ ಮುನ್ನಡೆಸಬೇಕು ಎಂದು ಮನವಿ ಮನವಿ ಮಾಡಿದರು.