ಬೆಂಗಳೂರು: ನಿರ್ಲಕ್ಷ್ಯದಿಂದ ರೋಗಿಗಳ ಸಾವಾದರೆ ನಾನು ಸಹಿಸುವುದಿಲ್ಲ ಎಂದು ಆರೋಗ್ಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಂಬಂಧ ಆರೋಗ್ಯಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಗೆ ಬರುವ ರೋಗಿಗಳ ಚಿಕಿತ್ಸೆ ಬಗ್ಗೆ ತಮ್ಮ ಸರಕಾರದ ಆದ್ಯತೆಗಳನ್ನು ತಿಳಿಸಿಕೊಟ್ಟರು.
ಎಲ್ಲ ರೋಗಿಗಳಿಗೆ ಮಾನವೀಯ ದೃಷ್ಠಿಕೋನದಿಂದ ಚಿಕಿತ್ಸೆ ನೀಡಬೇಕು. ಕರ್ತವ್ಯದ ಸಂದರ್ಭದಲ್ಲಿ ನಿರ್ಲಕ್ಷತನದಿಂದ ರೋಗಿಗಳಿಗೆ ತೊಂದರೆ ಆದರೆ ಕ್ಷಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಮತ್ತು ಸೂಕ್ಷ್ಮತೆ ಹೊಂದಿರುವ ಇಲಾಖೆ. ಇಲ್ಲಿ ತುರ್ತಾಗಿ ರೋಗಿಗಳಿಗೆ ಸ್ಪಂದನೆ ಸಿಗಬೇಕು.
ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಯಿಂದಾಗುವ ಕೆಲವು ತಪ್ಪುಗಳಿಂದ ರೋಗಿಗಳಿಗೆ ಸಮಸ್ಯೆಗಳಾಗುವುದನ್ನು ನಾವು ನೋಡುತ್ತಿರುತ್ತೇವೆ. ಈ ಬಗ್ಗೆ ಜಾಗ್ರತೆಯಿಂದ ಇರಬೇಕೆಂದು ಸಚಿವ ಗೂಂಡುರಾವ್ ಹೇಳಿದರು. ತಪ್ಪುಗಳನ್ನು ಸರಿಪಡಿಸೋಣ. ಆದರೆ, ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಬಾರದು. ಇದು ಅಕ್ಷಮ್ಯ. ಆ ರೀತಿಯ ಪ್ರಕರಣಗಳು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವರು ಅಧಿಕಾರಿಗಳಿಗೆ ನೀಡಿದ್ದಾರೆ.