ಬೆಂಗಳೂರು: ಸರ್ಕಾರಿ ಬಸ್ (Government Bus) ಗಳಲ್ಲಿ ಇಂದಿನಿಂದ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಬಹುದು. ಈ ಮಧ್ಯೆ ಖಾಸಗಿ ಬಸ್ ಗಳಲ್ಲಿಯೂ ಫ್ರೀ ಬಸ್ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಖಾಸಗಿ ಬಸ್ಗಳಿಗೆ ಈ ಫ್ರೀ ಪ್ರಯಾಣ ಸೇವೆ ಕೊಡುವ ಯೋಚನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.
ಇಂದು ಅಧಿಕೃತವಾಗಿ 11 ಗಂಟೆಗೆ ಮಹಿಳೆಯ ಉಚಿತ ಪ್ರಯಾಣಕ್ಕೆ ಚಾಲನೆ ಸಿಗಲಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾರ್ಯಗತ ಮಾಡುತ್ತಿದ್ದೇವೆ. ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದವು. ಈಗ ನಾವು ಜಾರಿ ಮಾಡುತ್ತಿದ್ದೇವೆ. ಈ ಹಿಂದೆ ಭರವಸೆಗಳನ್ನು ಕೊಟ್ಟಿದ್ರು. ಅದರಲ್ಲಿ ಜಾರಿ ಮಾಡಿದ್ದು ಕೆಲವು ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಗ್ಯಾರಂಟಿ (Congress Guarantee) ಕಾರ್ಯಕ್ರಮಗಳು ಯಶಸ್ವಿಯಾಗಿ ಆಗುತ್ತೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯಾ ಶಾಸಕರು, ಸಂಸದರ ಸಮ್ಮುಖದಲ್ಲಿ ಏಕಾಕಲದಲ್ಲಿ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಮೆಜೆಸ್ಟಿಕ್ಗೆ ಬರುತ್ತಾರೆ. ಸ್ಮಾರ್ಟ್ ಕಾರ್ಡ್ (Smart Card) ಆದಷ್ಟು ಬೇಗ ನೀಡುವ ಕೆಲಸ ಆಗುತ್ತೆ. ಸೇವಾ ಸಿಂಧು ಪೋರ್ಟಲ್ ಸರ್ವರ್ ಸ್ಲೋ ಆದ್ರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತೆ ಎಂದು ಸಚಿವರು ತಿಳಿಸಿದರು.