ವಾಷಿಂಗ್ಟನ್: ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗ ಪರಿವರ್ತಿತರಿಗೆ ಭಾರತದಲ್ಲಿ ಸಮಾನ ಹಕ್ಕುಗಳನ್ನು ಒದಗಿಸಬೇಕು ಎಂದು ವಾಷಿಂಗ್ಟನ್ ನ ಎಲ್ಜಿಬಿಟಿಕ್ಯೂ ಸಮುದಾಯದವರು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಜೂನ್ 21ರಿಂದ ನಾಲ್ಕು ದಿನ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದು,.22ರಂದು ಮೋದಿ ಗೌರವಾರ್ಥ ಬೈಡನ್ ದಂಪತಿ ಔತಣಕೂಟ ಆಯೋಜಿಸಿದ್ದಾರೆ.
‘ಸಲಿಂಗ ವಿವಾಹ, ಎಲ್ಜಿಬಿಟಿಕ್ಯೂ ಸಮುದಾಯದವರ ವಿವಾಹ ಕುರಿತ ಪ್ರಕರಣದ ವಿಚಾರಣೆಯನ್ನು ಭಾರತದ ಸುಪ್ರೀಂ ಕೋರ್ಟ್ ಕೆಲ ತಿಂಗಳಿನಿಂದ ನಡೆಸುತ್ತಿದೆ. ವಿವಾಹ ಕುರಿತ ಬೇಡಿಕೆಗೆ ಪ್ರಧಾನಿ ಬೆಂಬಲಿಸಬೇಕು ಹಾಗೂ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ. ನಾವೆಲ್ಲರೂ ಮನುಷ್ಯರೇ ಆಗಿದ್ದು, ಎಲ್ಜಿಬಿಟಿಕ್ಯೂ ಸಮುದಾಯದವರು ಸಮಾನ ಹಕ್ಕುಗಳಿಗೆ ಅರ್ಹರು’ ಎಂದು ದೇಸಿ ರೇನ್ಬೋ ಸಂಘಟನೆ ಕಾರ್ಯನಿರ್ವಾಹಕ ನಿರ್ದೇಶಕ ಅರುಣಾ ರಾವ್ ಸುದ್ದಿಸಂಸ್ಥೆಗೆ ತಿಳಿಸಿದರು.
ಶ್ವೇತಭವನದಲ್ಲಿ ನಡೆದ ಐತಿಹಾಸಿಕ ಪ್ರೈಡ್ ರ್ಯಾಲಿಯಲ್ಲಿ ಭಾಗವಹಿಸಲು ಆಹ್ವಾನ ಪಡೆದಿದ್ದ ಹಲವು ಭಾರತೀಯ ಅಮೆರಿಕನ್ನರಲ್ಲಿ ಅರುಣಾ ಕೂಡಾ ಒಬ್ಬರು. ರ್ಯಾಲಿ ಉದ್ದೇಶಿಸಿ ಅಧ್ಯಕ್ಷ ಜೋ ಬೈಡನ್, ಅವರ ಪತ್ನಿ ಡಾ.ಜಿಲ್ ಬೈಡನ್ ಮಾತನಾಡಿದ್ದರು.
‘ನನ್ನ ಪ್ರಕಾರ, ಮೆಟ್ರೊ,ನಗರ ಪ್ರದೇಶಗಳಲ್ಲಿ ಎಲ್ಜಿಬಿಟಿಕ್ಯೂ ಜನರಿಗೆ ಕೆಲ ಮಟ್ಟಿಗೆ ಬೆಂಬಲವಿದೆ. ಸಣ್ಣ ಪಟ್ಟಣಗಳು, ಗ್ರಾಮಗಳಲ್ಲಿ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಅಲ್ಲಿ, ಈ ಸಮುದಾಯವರಿಗೆ ಸಮಾನ ಹಕ್ಕುಗಳು ಸಿಗುತ್ತಿಲ್ಲ’ ಎಂದು ಅರುಣಾ ಹೇಳಿದ್ದಾರೆ.