ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಶಕ್ತಿ ಯೋಜನೆ(Free Bus Travel For Women Scheme) ಎರಡನೇ ದಿನಕ್ಕೆ ಕಾಲಿಟ್ಟು ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಹಣ ಖರ್ಚು ಮಾಡದೆ ಓಡಾಡುತ್ತಿದ್ದಾರೆ. ಬಹುತೇಕ ಕೆಎಸ್ಆರ್ಟಿಸಿ, ಸರ್ಕಾರಿ ಬಸ್ಗಳು ಫುಲ್ ಆಗಿದ್ದು ಖಾಸಗಿ ಬಸ್ಗಳು ಖಾಲಿ ಖಾಲಿಯಾಗಿವೆ. ಸರ್ಕಾರದ ಫ್ರೀ ಬಸ್ ಯೋಜನೆಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ
ಉಚಿತ ಪ್ರಯಾಣ ಎಂದು ತಿಳಿದಿದ್ದ ಹಿನ್ನೆಲೆ ಸಾಕಷ್ಟು ಮಂದಿ ಉಚಿತ ಪ್ರಯಾಣದ ಅನುಭವವನ್ನು ಪಡೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ದಾಣಗಳಿಗೆ ಆಗಮಿಸಿದ್ದರು. ಮಧ್ಯಾಹ್ನದ ಬಳಿಕ ನಗರ ಸಾರಿಗೆ ಅಥವಾ ಸಮೀಪದ ಊರಿಗಳಿಗೆ ತೆರಳಿ ಶೂನ್ಯ ಶುಲ್ಕ ಟಿಕೆಟ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಸ್ನೇಹಿತರಿಗೆ ಟಿಕೆಟ್ ತೋರಿಸಿ ಅಥವಾ ಮನೆಯಲ್ಲಿ ಉಚಿತ ಪ್ರಯಾಣ ಅನುಭವ ಹೇಳಿಕೊಂಡು ಖುಷಿಪಟ್ಟರು. ಇತ್ತ ಸಾರಿಗೆ ಸಂಸ್ಥೆಗಳು ಮಹಿಳೆಯರಿಗೆ ಹೂ ನೀಡಿ ಸ್ವಾಗತಿಸಿದ್ದು ಮಹಿಳೆಯರ ಸಂತೋಷವನ್ನು ದುಪ್ಪಟ್ಟು ಮಾಡಿತ್ತು.
ಇತ್ತ ಉಚಿತ ಬಸ್ಗಳ ಸೇವೆ ಆರಂಭವಾಗುತ್ತಿದ್ದಂತೆ ಮಹಿಳೆಯರು ಖಾಸಗಿ ಬಸ್ಗಳತ್ತ ಮುಖ ಮಾಡಲೇ ಇಲ್ಲ. ಹೀಗಾಗಿ, ಹಲವು ನಗರಗಳಲ್ಲಿ ಖಾಸಗಿ ಬಸ್ ನಿಲ್ದಾಣಗಳು ಭಾನುವಾರ ಬಿಕೋ ಎನ್ನುತ್ತಿದ್ದವು. ಇತ್ತ ಖಾಸಗಿ ಬಸ್ ಮಾಲೀಕರು ಕೂಡಾ ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗದೇ, ಪ್ರಯಾಣಿಕರು ಬಾರದೇ ಬೇಸರದಿಂದಲೇ ದಿನ ಕಳೆದರು. ಮೊದಲ ದಿನವೇ ಇಷ್ಟು ಪರಿಣಾಮ ಬೀರುತ್ತದೆ ಎಂದು ಊಹಿಸಿರಲಿಲ್ಲ ಎಂದು ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಸೇರಿ ಹಲವು ನಗರಗಳ ಖಾಸಗಿ ಬಸ್ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರ ಸಾರಿಗೆ ಬಸ್ಗಳಲ್ಲಿಯೂ ಉಚಿತ ಪ್ರಯಾ ಸೌಲಭ್ಯ ಹಿನ್ನೆಲೆ ಬಹುತೇಕರು ಆಟೋಗಳಿಂದ ದೂರ ಉಳಿದು ಸಿಟಿ ಬಸ್ ಹತ್ತಿದ್ದರು. ಉಚಿತ ಪ್ರಯಾಣ ಎಂಬ ಕಾರಣಕ್ಕೆ ಹೆಚ್ಚು ಮಂದಿ ಯಾವ ರೀತಿ ಇರಬಹುದು ಟಿಕೆಟ್ ಎಂಬ ಕುತೂಹಲಕ್ಕೆ ಬಸ್ ಹತ್ತಿದ್ದು ಉಂಟು. ಹೀಗಾಗಿ, ಆಟೋಗಳು ಕೂಡಾ ಖಾಲಿಯಾಗಿ ಓಡಾಟ ನಡೆಸಿದವು. ಇತ್ತ ಆಟೋ ಚಾಲಕರು ಕೂಡಾ ನಿರಾಸೆ/ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಉಚಿತ ಬಸ್ ಪ್ರಯಾಣ ಆಟೋ, ಕ್ಯಾಬ್ ಮಾತ್ರವಲ್ಲ ಮೆಟ್ರೋ ಸಂಚಾರದ ಮೇಲೆ ಪರಿಣಾಮ ಬೀರಿದೆ. ದಿನವಿಡೀ ಬಹುತೇಕ ಮೆಟ್ರೋ ರೈಲುಗಳು ಅರ್ಧದಷ್ಟು ಖಾಲಿಯಾಗಿಯೇ ಸಂಚಾರ ನಡೆಸಿವೆ.