ಬೆಂಗಳೂರು: ಭಾವನೆಗಳನ್ನು ಕೆರಳಿಸುವುದು ಸುಲಭ. ಇದರಿಂದ ಸಂಘರ್ಷಗಳಾಗಬಹುದೇ ಹೊರತು ಜನರ ಬದುಕಿಗೆ ಉಪಯೋಗ ಆಗುವುದಿಲ್ಲ. ಸಿದ್ಧಲಿಂಗಯ್ಯ ಅವರು ಜನಸಾಮಾನ್ಯರ ಬದುಕಿಗಾಗಿ ಹೋರಾಟ ಮಾಡಿದವರು ಎಂದು ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್ ಹೇಳಿದರು.
ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ, ಬಾಬು ಜಗಜೀವನ ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಿದ್ಧಲಿಂಗಯ್ಯ ಅವರ ಅಭಿಮಾನಿ ಬಳಗವು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗಯ್ಯ ಪರಿನಿಬ್ಬಾಣ ಎರಡನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ, ಎಚ್. ನರಸಿಂಹಯ್ಯ ಅವರಂತೆ ಸಿದ್ಧಲಿಂಗಯ್ಯ ಅವರಿಂದಲೂ ಸದನಕ್ಕೆ ಮಹತ್ವ ಬಂತು. ಶಿಕ್ಷಕರ ಸಮಸ್ಯೆಗಿಂತ ಶಿಕ್ಷಣದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದರು. ಜನರ ಒಡನಾಟ ಇದ್ದ ಅವರು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದರು.
ಸಿದ್ಧಲಿಂಗಯ್ಯ ಅವರ ‘ಅವತಾರ’ಗಳು ಕೃತಿಯನ್ನು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಮಂಗಳಾ ಕುಮಾರಿ ಬಿ.ಎಸ್. ಅವರು ಇಂಗ್ಲಿಷ್ಗೆ ಅನುವಾದಿಸಿದ್ದ ‘ಅವತಾರಸ್’ ಕೃತಿಯನ್ನು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಬಿಡುಗಡೆ ಮಾಡಿದರು.
‘ರಾಜ್ಯದಲ್ಲಿ 30 ಸಾವಿರ ಹಳ್ಳಿಗಳಿವೆ. ಕನಿಷ್ಠ 30 ಸಾವಿರ ಗ್ರಾಮ ದೇವತೆಗಳಿವೆ. ಒಂದಕ್ಕೊಂದು ವಿಶಿಷ್ಠವಾದುದು. ಯಾವ ದೇವರನ್ನೂ ಗ್ರಾಮ ದೇವತೆಯನ್ನೂ ಗೇಲಿ ಮಾಡದೇ ಅದನ್ನು ನಂಬುವ ಭಕ್ತರು ಸರಿಯಾದ ರೀತಿಯಲ್ಲಿ ಪೂಜಿಸಲಿ ಎಂಬ ಕಾರಣಕ್ಕೆ ‘ಅವತಾರಗಳು’ ಕೃತಿ ರಚಿಸಿದರು. ಇದು ಈಗಾಗಲೇ 6ನೇ ಮುದ್ರಣ ಕಂಡಿದೆ. ಆದರೆ ಬೇರೆ ಭಾಷೆಗಳಿಗೆ ಹೋಗಿರಲಿಲ್ಲ. ಈಗ ಇಂಗ್ಲಿಷ್ಗೆ ಅನುವಾದವಾಗಿರುವುದು ಉತ್ತಮ ಬೆಳವಣಿಗೆ. ಬೇರೆ ಬೇರೆ ಭಾಷೆಗಳಿಗೆ ಹೋಗಬೇಕು’ ಎಂದು ಕಪ್ಪಣ್ಣ ಆಶಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕ ಜನಾರ್ದನ (ಜನ್ನಿ), ಕೆಐಎಡಿಬಿ ಮುಖ್ಯ ಎಂಜಿನಿಯರ್ ಸ್ವಾಮಿ ಟಿ.ಆರ್., ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್, ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷೆ ಮಾನಸ ಸಿದ್ಧಲಿಂಗಯ್ಯ, ಉಪಾಧ್ಯಕ್ಷೆ ಸಿ. ರಮಾಕುಮಾರಿ, ಅನುವಾದಕಿ ಮಂಗಳಾ ಕುಮಾರಿ ಬಿ.ಎಸ್. ಇದ್ದರು.