ಬೆಳಗಾವಿ: ಲೋಕಸಭೆ ಚುನಾವಣೆವರೆಗೆ (Loka Sabha Elections 2024) ಮಾತ್ರ ಗುದ್ದಾಡಿಕೊಂಡು ಐದು ಗ್ಯಾರಂಟಿ (Congress Guarantees) ಯೋಜನೆಗಳನ್ನು ಮುಂದುವರಿಸುತ್ತಾರೆ. ನಂತರ ಕಾಂಗ್ರೆಸ್ನವರು ಜನರಿಗೆ ಮೋಸ ಮಾಡುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ಜಿಲ್ಲೆಯ ಅಥಣಿಯಲ್ಲಿ ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಮುಂದುವರಿಸಿದರೆ ಅಭಿವೃದ್ಧಿಕಾರ್ಯ ಬಂದ್ ಮಾಡಬೇಕಾಗುತ್ತದೆ. ಇದರಿಂದ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ನಾವು ಯಾರೂ ಗ್ಯಾರಂಟಿಗಳ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ಮುಖಂಡರು, ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ, ಜನ ಮತ ಹಾಕಿದ್ದಾರೆ, ಅವರಿಗೂ ಇದೆ, ನಮಗೂ ಇದೆ. ಆಮೇಲೆ ತಪ್ಪು ಮಾಡಿದರೆ ಮಾತಾಡೋಣ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಎರಡು ಸ್ಥಾನಕ್ಕೆ ಸೀಮಿತ ಮಾಡುತ್ತೇವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಆಗಲಿ ಆಗಲಿ ಬಹಳ ಸಂತೋಷ ಬಹಳ ಸಂತೋಷ ಎಂದರು.