ಬೊಗೋಟಾ: ವಿಮಾನ ಅಪಘಾತದಿಂದ ಅಮೆಜಾನ್ ದಟ್ಟ ಅರಣ್ಯದಲ್ಲಿ ಕಳೆದ 40 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದಿರುವ ನಾಲ್ವರು ಮಕ್ಕಳನ್ನು ರಕ್ಷಿಸಿದ ರಕ್ಷಣಾ ತಂಡದ ಸದಸ್ಯರು ಸಂದರ್ಶನ ನೀಡಿದ್ದು, ಈ ವೇಳೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ವಿಮಾಣ ಅಪಘಾತವಾಗಿ ಮಕ್ಕಳ ತಾಯಿ, ಅಜ್ಜಿ ಹಾಗೂ ಪೈಲರ್ ದಾರುಣವಾಗಿ ಸಾವನ್ನಪ್ಪಿದ್ದರು. ಈ ವೇಳೆ 13, 9, 5 ಮತ್ತು 1 ವರ್ಷದ ನಾಲ್ವರು ಮಕ್ಕಳು ಪವಾಡ ಸದೃಶ್ಯ ರೀತಿಯಲ್ಲಿ ಅಮೆಜಾನ್ ಕಾಡಿನಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚ ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲಾಯಿತು. ಆಗ ಮಕ್ಕಳ ಆರೋಗ್ಯ ಸ್ಥಿತಿಗತಿ ಹೇಗಿತ್ತು? ಅವರು ಏನು ಹೇಳಿದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪುಟ್ಟ ಮಗುವನ್ನು ಎತ್ತಿಕೊಂಡಿದ್ದ ಲೆಸ್ಲಿ ನನ್ನನ್ನು ಕಂಡಾಕ್ಷಣ ಓಡಿ ಬಂದಳು. ಬಂದವಳೇ, “ನನಗೆ ಹಸಿವಾಗಿದೆ” ಎಂದಳು. ಇಬ್ಬರು ಹುಡುಗರಲ್ಲಿ ಒಬ್ಬ ಮಲಗಿದ್ದ. ಅವರು ಕೂಡ ಎದ್ದು ಬಂದು “ನಮ್ಮ ತಾಯಿ ಸತ್ತಿದ್ದಾರೆ” ಎಂದರು ಅಂತ ರಕ್ಷಣಾ ತಂಡದ ಸದಸ್ಯರಲ್ಲೊಬ್ಬರಾದ ನಿಕೋಲಸ್ ಒರ್ಡೊನೆಜ್ ಗೋಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ಲೆಸ್ಲಿ ತಾಯಿ 4 ದಿನಗಳ ವರೆಗೆ ಜೀವಂತವಾಗಿದ್ದರು ಎನಿಸುತ್ತದೆ. ಆಕೆ ಸಾಯುವ ಮುನ್ನ, “ಮಕ್ಕಳೇ ನೀವು ಇಲ್ಲಿಂದ ಹೊರಡಿ. ನಿಮ್ಮ ತಂದೆ ಬಳಿಗೆ ಹೋಗಿ. ನಾನು ತೋರಿದ ಪ್ರೀತಿಯನ್ನೇ ಅವರೂ ನಿಮಗೆ ತೋರಿಸುತ್ತಾರೆ” ಎಂದು ಹೇಳಿದ್ದರಂತೆ ಅಂತ ಮತ್ತೊಬ್ಬ ಸದಸ್ಯ ಮ್ಯಾನುಯೆಲ್ ಮಿಲ್ಲರ್ ರಾನೋಕ್ ತಿಳಿಸಿದ್ದಾರೆ.
ಮಕ್ಕಳು ತುಂಬಾ ನಿಶ್ಯಕ್ತರಾಗಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಟ್ಟಿ ಪದಾರ್ಥ ಸೇವಿಸಲು ಇನ್ನೂ ಅವರಿಂದ ಸಾಧ್ಯವಾಗುತ್ತಿಲ್ಲ. ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ ಎಂದು ಸದಸ್ಯರು ಮಾಹಿತಿ ನೀಡಿದ್ದಾರೆ.
ಮೇ 1 ರಂದು ವಿಮಾನ ಅಪಘಾತ ಸಂಭವಿಸಿತ್ತು. ಅದಾದ ಎರಡು ವಾರಗಳ ನಂತರ ಶೋಧ ತಂಡವು ಅಮೆಜಾನ್ ದಟ್ಟ ಕಾಡಿನಲ್ಲಿ ವಿಮಾನ ಪತ್ತೆ ಹಚ್ಚಿ ಪೈಲಟ್ ಸೇರಿದಂತೆ ಮೂವರ ಮೃತದೇಹಗಳನ್ನು ವಶಪಡಿಸಿಕೊಂಡಿತ್ತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ.
ಮಕ್ಕಳ ಹುಡುಕಾಟದ ವೇಳೆ, ಅವರ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿ ಹಲವು ಕುರುಹುಗಳು ಪತ್ತೆಯಾಗಿತ್ತು. ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿಯೇ ಹುಟುಕಾಟ ತೀವ್ರಗೊಳಿಸಲಾಗಿತ್ತು. ಮಕ್ಕಳು ಹಸಿವಿನಿಂದ ಸಾಯಬಾರದು ಎಂಬ ಕಾರಣಕ್ಕೆ ಆಹಾರ ಪದಾರ್ಥಗಳು ಮತ್ತು ನೀರಿನ ಬಾಟಲಿಗಳನ್ನು ಕೂಡ ಹೆಲಿಕಾಪ್ಟರ್ ಮೂಲಕ ಅನೇಕ ಕಡೆ ಹಾಕಲಾಗಿತ್ತು. ಕೊನೆಗೆ ಅಪಘಾತ ನಡೆದ ಸ್ಥಳದ ಪಶ್ಚಿಮ ದಿಕ್ಕಿನಿಂದ ಸುಮಾರು 5 ಕಿಮೀ ದೂರದಲ್ಲಿ ಮಕ್ಕಳು ಪತ್ತೆಯಾಗಿದ್ದು ಸದ್ಯ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.