ಬಾಗಲಕೋಟೆ ;- ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟೀ `ಶಕ್ತಿ’ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬನಹಟ್ಟಿಯಲ್ಲಿ ಅಧಿಕೃತ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿ ಸೇರಿ ಎಲ್ಲ ಉದ್ದೇಶಗಳಿಗೆ `ಶಕ್ತಿ’ ಯೋಜನೆ ಬಳಸಿಕೊಳ್ಳಬೇಕು. ಇದಕ್ಕೆ ಸರ್ಕಾರ ಯಾವದೇ ಮಿತಿ ಹಾಕದೆ ಎಲ್ಲ ಮಹಿಳೆಯರಿಗೂ ನಿರಂತರ ದೊರಕುವಂತೆ ಮಾಡಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು. ಮಹಿಳೆಯರಿಗೆ ನೀಡಿದ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸುವ ಗುರಿ ಹೊಂದಿರುವ ಸರ್ಕಾರದ ನಡೆಯನ್ನು ಗೌರವಿಸುತ್ತೇನೆ. ಯಾವದೇ ಕಾರಣಕ್ಕೂ ದುರುದ್ಧೇಶ ಅಥವಾ ನಿಯಮಗಳನ್ನು ಹಾಕುವದು ಬೇಡವೆಂದು ಸವದಿ ತಿಳಿಸಿದರು.
ಕೆಲ ಹೊತ್ತು ಗೊಂದಲ:
ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಬನಹಟ್ಟಿ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶಾಸಕ ಸಿದ್ದು ಸವದಿ ಬಸ್ ನಿಲ್ದಾಣದೊಳಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಪರ ಜೈಕಾರ ಹಾಕುತ್ತ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಜಯಘೋಷ ಹಾಕುತ್ತಿರುವಾಗ ಸ್ವಲ್ಪ ಗೊಂದಲ ಸೃಷ್ಟಿಯಾಗುವಲ್ಲಿ ಕಾರಣವಾಯಿತು.
ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಶಾಸಕ ಸವದಿ ಬಸ್ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಬಸ್ದೊಳಗಿದ್ದ ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ಒದಗಿಸಿ ವೇದಿಕೆ ಏರದೆ ಹೊರ ನಡೆದ ಪ್ರಸಂಗ ನಡೆಯಿತು.
ಇದೇ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ಶಂಕರ ಕೆಸರಗೊಪ್ಪ, ರಾಜು ಭದ್ರನ್ನವರ, ಮಹಾದೇವ ಕೋಟ್ಯಾಳ, ಲಕ್ಷ್ಮಣ ದೇಸಾರಟ್ಟಿ, ಪರಪ್ಪ ಪೂಜಾರಿ, ಆನಂದ ಕಂಪು, ಕಂಬಾರ, ಗಿರೀಶ ಮರನೂರ ಸೇರಿದಂತೆ ಅನೇಕರಿದ್ದರು.