ನವದೆಹಲಿ: ಅರಬ್ಬೀ ಸಮುದ್ರದ ತೀರ ಪ್ರದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಬಿಪರ್ ಜಾಯ್ ಚಂಡಮಾರುತ (Cyclone Biparjoy) ಗುರುವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ (Gujarat Coast) ಅಪ್ಪಳಿಸುವ ಸಾಧ್ಯತೆಯಿದ್ದು, ಈಗಾಗಲೇ ಸುಮಾರು 7,500 ಜನರನ್ನು ಸ್ಥಳಾಂತರ ಮಾಡಲಾಗಿದೆ.
ಗಂಟೆಗೆ 150 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಗುಜರಾತ್ ಮತ್ತು ಪಾಕಿಸ್ತಾನದ (Pakistan) ಸಮುದ್ರ ತೀರದ ಪ್ರದೇಶಗಳಲ್ಲಿ ಭಾರೀ ವಿನಾಶ ಸೃಷ್ಟಿಸುವ ಆಂತಕ ಎದುರಾಗಿದೆ. ಗುಜರಾತ್ನ ಜಖೌ ಬಂದರಿನ ಬಳಿ ಗುರುವಾರ ಮಧ್ಯಾಹ್ನದ ವೇಳೆಗೆ ಅತ್ಯಂತ ತೀವ್ರವಾಗಿ ಚಂಡಮಾರುತ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಅರಬ್ಬೀ ಸಮುದ್ರದಲ್ಲಿ 58 ವರ್ಷಗಳಲ್ಲಿ ಜೂನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಶಕ್ತಿಶಾಲಿ ಸೈಕ್ಲೋನ್ ಇದಾಗಿದ್ದು, 25 ವರ್ಷಗಳ ಬಳಿಕ ಜೂನ್ನಲ್ಲಿ ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸುತ್ತಿರುವ ಚಂಡಮಾರುತ ಇದಾಗಿದೆ. ಭಾರೀ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ ಪಶ್ಚಿಮ ರೈಲ್ವೇ ಒಟ್ಟು 67 ರೈಲುಗಳ ಸಂಚಾರವನ್ನು ರದ್ದು ಮಾಡಿದೆ.
ಕಛ್ (Kutch) ಮತ್ತು ಸೌರಾಷ್ಟ್ರ (Sourashtra) ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಅಧಿಕಾರಿಗಳು ಜನರನ್ನು ಸ್ಥಳಾಂತರ ಮಾಡುವ ಕೆಲಸ ಆರಂಭಿಸಿದ್ದಾರೆ. ಎರಡು ಜಿಲ್ಲೆಗಳಲ್ಲಿ ಸಮುದ್ರ ತೀರದಿಂದ 10 ಕಿ.ಮೀ ದೂರದವರೆಗೆ ನೆಲೆಸಿರುವ ಸುಮಾರು 7,500 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇಂದು ಮತ್ತಷ್ಟು ಜನರನ್ನು ಸ್ಥಳಾಂತರ ಮಾಡಲಾಗುತ್ತದೆ.